ಕರ್ನಾಟಕ

karnataka

ETV Bharat / state

ಬಸವರಾಜ ಬೊಮ್ಮಾಯಿ ತಮ್ಮ ಪೇಸಿಎಂ ಬಿರುದನ್ನು ಪದೇ ಪದೆ ನಿರೂಪಿಸುತ್ತಿದ್ದಾರೆ: ರಮೇಶ್ ಬಾಬು ಆರೋಪ - ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಅಮೃತಮಹಲ್​

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಅಮೃತಮಹಲ್​ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲು ಡಿನೋಟಿಫಿಕೇಷನ್ ಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ರಮೇಶ್ ಬಾಬು
ಕಾಂಗ್ರೆಸ್ ವಕ್ತಾರ ರಮೇಶ್ ಬಾಬು

By

Published : Apr 13, 2023, 5:10 PM IST

ಕಾಂಗ್ರೆಸ್ ವಕ್ತಾರ ರಮೇಶ್ ಬಾಬು

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ದೇಶದಲ್ಲಿ ಕುಖ್ಯಾತಿಗೆ ಪಾತ್ರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪೇಸಿಎಂ ಬಿರುದನ್ನು ಪದೇ ಪದೆ ನಿರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆರೋಪ ಮಾಡಿದ್ದಾರೆ.

ಅಮೃತ್ ಮಹಲ್ ಕಾವಲ್ ಯೋಜನೆಗೆ ಕಾಯ್ದಿರಿಸಿದ ಜಮೀನು ಹಿಂಪಡೆದ ಆರೋಪ: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ವಕ್ತಾರ ರಮೇಶ್ ಬಾಬು, ’’ಈ ಸರ್ಕಾರ ಇದೆಲ್ಲದಕ್ಕೂ ಪೂರಕವಾಗಿ ಮಾರ್ಚ್ 29ರಂದು ಚುನಾವಣಾ ಆಯೋಗ ರಾಜ್ಯ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ ನಂತರ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ನೀರಾವರಿ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳು ಅನೇಕ ಅಕ್ರಮಗಳನ್ನು ಎಸಗಲಾಗಿದೆ. ಅದಕ್ಕೆ ಮತ್ತೊಂದು ತಾಜಾ ಉದಾಹರಣೆ ಕಂದಾಯ ಇಲಾಖೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಸುಮಾರು 3000 ಎಕರೆ ಪ್ರದೇಶವನ್ನು ಅಮೃತ್ ಮಹಲ್ ಕಾವಲ್ ಯೋಜನೆಗೆ ಕಾಯ್ದಿರಿಸಿದ ಜಮೀನನ್ನು ಹಿಂಪಡೆದಿದೆ‘‘ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘‘1922-23ರಲ್ಲಿ ಮೈಸೂರು ಸರ್ಕಾರ ಕರ್ನಾಟಕದಲ್ಲಿ ಗೋತಳಿಯ ಅಭಿವೃದ್ಧಿಗೆ ರಾಜ್ಯದ ತುಮಕೂರು, ಮೈಸೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಮೃತಮಹಲ್ ಕಾವಲ್ ಎಂದು ಜಮೀನು ಕಾಯ್ದಿರಿಸಿದ್ದರು. ಸ್ವತಂತ್ರ್ಯ ಪೂರ್ವದ ರಾಜ್ಯದಲ್ಲಿ ಪಶುಸಂಗೋಪನಾ ಇಲಾಖೆಯನ್ನು ಅಮೃತಮಹಲ್ ಇಲಾಖೆ ಎಂದು ಕರೆಯಲಾಗಿತ್ತು. ಈ ಜಮೀನುಗಳು ಕಂದಾಯ ಇಲಾಖೆಗಿಂತ ಪಶು ಸಂಗೋಪನಾ ಇಲಾಖೆಯ ಸುಪರ್ದಿಯಲ್ಲಿತ್ತು. ವಿವಿಧ ಕಾರಣಗಳಿಗೆ ಈ ಯೋಜನೆ ಜಮೀನನ್ನು ಬೇರೆ ಕಾರಣಗಳಿಗೆ ಬಳಸಿಕೊಳ್ಳಲಾಗಿದೆ‘‘ ಎಂದು ರಮೇಶ್​ ಬಾಬು ದೂರಿದ್ದಾರೆ.

ನೀತಿ ಸಂಹಿತೆ ನಿಯಮಾವಳಿಯಿಂದ ತಪ್ಪಿಸಿಕೊಳ್ಳಲು ಹಳೆಯ ದಿನಾಂಕ: ಆದರೆ, ’’ಬಿಜೆಪಿ ಸರ್ಕಾರ ಚಿತ್ರದುರ್ಗದ ಹೊಳಲ್ಕೆರೆಯ ಅಮೃತಮಹಲ್ ಜಮೀನನ್ನು ಖಾಸಗಿ ವ್ಯಕ್ತಿಗಳು ಹಾಗೂ ಕಂಪನಿಗಳಿಗೆ ನೀಡಲು ಡಿನೋಟಿಫಿಕೇಶನ್ ಮಾಡಲು ಮುಂದಾಗಿದೆ. ಈ ಕುರಿತು ಮಾರ್ಚ್​ 29ರಂದು ಆದೇಶ ಹೊರಡಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಈ ಆದೇಶ ಬಂದಿದೆ. ನೀತಿ ಸಂಹಿತೆ ನಿಯಮಾವಳಿಯಿಂದ ತಪ್ಪಿಸಿಕೊಳ್ಳಲು ಹಳೆಯ ದಿನಾಂಕ ಹಾಕಿ ಕಂದಾಯ ಇಲಾಖೆಯ ಮೂಲಕ ಈ ಆದೇಶ ಹೊರಡಿಸಲಾಗಿದೆ. ಈ ಜಮೀನಿನಲ್ಲಿ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಸೇರಿದಂತೆ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಜಮೀನನ್ನು ಖಾಸಗಿಯವರಿಗೆ ನೀಡಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಈ ವರದಿ ನೀಡಿದ್ದರೂ ಮುಖ್ಯಮಂತ್ರಿಗಳು ಈ ವರದಿ ಧಿಕ್ಕರಿಸಿ, ಈ ಆದೇಶ ಹೊರಡಿಸಿ ಮಂಜೂರು ಮಾಡಿದ್ದಾರೆ‘‘ ಎಂದು ವಿವರಿಸಿದ್ದಾರೆ.

ನೂರಾರು ಎಕರೆ ಹಂಚಿಕೆ ಮಾಡಲಾಗಿದೆ:ಚುನಾವಣೆ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಜಮೀನು ಡಿನೋಟಿಫಿಕೇಶನ್ ಮಾಡಿರುವುದೇಕೆ? ಯಾರಿಗೆ ಹಂಚಿಕೆ ಮಾಡುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ? ಸಂಘ ಪರಿವಾರಕ್ಕೆ ಸಂಬಂಧಿಸಿದ ಜನಸೇವಾ ಸಂಸ್ಥೆ ಸೇರಿದಂತೆ ನೂರಾರು ಎಕರೆ ಹಂಚಿಕೆ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ಈ ರೀತಿ ಅಧಿಸೂಚನೆ ಮೂಲಕ ಜಮೀನು ಹಂಚಿಕೆ ಮಾಡುವುದರ ಹಿಂದೆ ದೊಡ್ಡ ಮಟ್ಟದ ಹುನ್ನಾರವಿದೆ. ಹೀಗಾಗಿ ಚುನಾವಣಾ ಆಯೋಗ ಮಾರ್ಚ್ 29ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ತಡೆ ಹಿಡಿಯಬೇಕು. ಇದರ ವ್ಯವಹಾರವನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದಿದ್ದಾರೆ.

ಇಲಾಖೆ ಯಾವುದೇ ಅನುಮತಿ ಪಡೆದಿಲ್ಲ: ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಹಕಾರ ಸಂಘಗಳಿಗೆ ನೀಡಿರುವ ಜಮೀನು ರದ್ದುಗೊಳಿಸಲು ಸಹಕಾರಿ ಇಲಾಖೆ ಅನುಮತಿ, ಪಶುಸಂಗೋಪನಾ ಇಲಾಖೆ ಅನುಮತಿ ಹಾಗೂ ಕಂದಾಯ ಇಲಾಖೆ ಅನುಮತಿ ನೀಡಬೇಕು. ಆದರೆ ಯಾವುದೇ ಇಲಾಖೆ ಅನುಮತಿ ಪಡೆದಿಲ್ಲ. ಈ ಪ್ರಕ್ರಿಯೆಯ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಇದರಲ್ಲಿ ಅಧಿಕಾರಿಗಳು ಈ ಜಮೀನು ಹಿಂಪಡೆದು ಖಾಸಗಿಯವರಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರೂ ಮುಖ್ಯಮಂತ್ರಿಗಳು ಈ ಆದೇಶ ಹೊರಡಿಸಿದ್ದಾರೆ ಎಂದು ರಮೇಶ್​ ಬಾಬು ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿಯಿಂದ ಚುನಾವಣಾ ಆಯೋಗಕ್ಕೆ ದೂರು: ಇದರ ಹಿಂದೆ ಶೇ 40ರಷ್ಟು ಕಮಿಷನ್ ಭ್ರಷ್ಟಾಚಾರ ನಡೆದಿದೆ. ಒಂದು ವೇಳೆ ಬಗರ್ ಹುಕುಂ ಮೂಲಕ ಯಾವುದೇ ರೈತರು ಈ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಅವರಿಗೆ ಈ ಜಮೀನು ನೀಡುವುದಾದರೆ ಕಾಂಗ್ರೆಸ್ ಪಕ್ಷ ಯಾವುದೇ ಆಕ್ಷೇಪ ಮಾಡುವುದಿಲ್ಲ. ಆದರೆ, ರೈತರ ಹೊರತಾಗಿ ಖಾಸಗಿಯವರಿಗೆ ನೀಡಿ 40% ದಂಧೆ ಮಾಡುವುದಕ್ಕೆ ಕಾಂಗ್ರೆಸ್ ಒಪ್ಪುವುದಿಲ್ಲ. ಈ ವಿಚಾರವಾಗಿ ಕೆಪಿಸಿಸಿ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು. ಮಾಜಿ ಮೇಯರ್ ರಾಮಚಂದ್ರಪ್ಪ ಸಹ ಉಪಸ್ಥಿತರಿದ್ದರು.

ಇದನ್ನೂ ಓದಿ:KPSC ನೇಮಕಾತಿ: ಸಹಕಾರ ಸಂಘಗಳಲ್ಲಿ ನಿರೀಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details