ಬೆಂಗಳೂರು:ಇಂದು ಬಿಡುಗಡೆಯಾಗಿರುವ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಸಾಕಷ್ಟು ವಿಶೇಷತೆಗಳು ಗಮನ ಸೆಳೆಯುತ್ತಿವೆ. ರಾಮನಗರದಿಂದ ಕಣಕ್ಕಿಳಿಯಲು ಉದ್ದೇಶಿಸಿದ್ದ ಸಂಸದ ಡಿ ಕೆ ಸುರೇಶ್ ಸ್ಪರ್ಧೆಯನ್ನು ಎಐಸಿಸಿ ನಿರಾಕರಿಸಿದೆ. ಅವರ ಬದಲು ಇಕ್ಬಾಲ್ ಹುಸೇನ್ಗೆ ಮತ್ತೊಮ್ಮೆ ಟಿಕೆಟ್ ಘೋಷಣೆ ಮಾಡಿದೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿ ಸೌಮ್ಯಾರೆಡ್ಡಿಗೆ ಬಿಟಿಎಂ ಲೇಔಟ್ ಹಾಗೂ ಜಯನಗರದಿಂದ ಟಿಕೆಟ್ ಘೋಷಣೆಯಾಗಿದೆ. ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಎಸ್ಎಸ್ ಮಲ್ಲಿಕಾರ್ಜುನ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅವರ ತಂದೆ ಶಾಮನೂರು ಶಿವಶಂಕರಪ್ಪ, ದೇವನಹಳ್ಳಿಯಿಂದ ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಹಾಗೂ ಕೆಜಿಎಫ್ನಿಂದ ಅವರ ಪುತ್ರಿ ರೂಪಾ ಶಶಿಧರ್(ರೂಪಕಲಾ ಎಂ) ಟಿಕೆಟ್ ಪಡೆದಿದ್ದಾರೆ. ಬೆಂಗಳೂರಿನ ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಂ ಕೃಷ್ಣಪ್ಪ ಟಿಕೆಟ್ ಪಡೆದಿದ್ದಾರೆ. ಪಕ್ಕದ ಗೋವಿಂದರಾಜ್ ನಗರ ಕ್ಷೇತ್ರದಿಂದ ಕಳೆದ ಸಾರಿ ಸೋಲನುಭವಿಸಿದ್ದ ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣಗೆ ಟಿಕೆಟ್ ನೀಡಲಾಗಿದೆ. ರಾಣೆಬೆನ್ನೂರು ಕ್ಷೇತ್ರದಿಂದ ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡಗೆ ಟಿಕೆಟ್ ಘೋಷಿಸಲಾಗಿದೆ.
ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಕ್ಷೇತ್ರವಿಲ್ಲ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯಗೆ ಟಿಕೆಟ್ ಕೈತಪ್ಪಿದೆ. ಸಿದ್ದರಾಮಯ್ಯ ಇನ್ನೊಂದು ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಸದ್ಯ ಅವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಕೋಲಾರಕ್ಕೆ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ. ಹಾಗೆಯೇ ಅವರ ಹಾಲಿ ಕ್ಷೇತ್ರ ಬಾದಾಮಿಗೂ ಅಭ್ಯರ್ಥಿ ಪ್ರಕಟವಾಗಿಲ್ಲ. ಸಾಗರ ಕ್ಷೇತ್ರದಿಂದ ತಮ್ಮ ಪುತ್ರಿಗೆ ಟಿಕೆಟ್ ನೀಡುವಂತೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮನವಿ ಮಾಡಿದ್ದರು. ಆದರೆ ಅದಕ್ಕೆ ಸಮ್ಮತಿ ಸಿಕ್ಕಿಲ್ಲ. ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರೀಕ್ಷೆಯಂತೆ ಕನಕಪುರದಿಂದಲೇ ಕಣಕ್ಕಿಳಿದಿದ್ದಾರೆ. ಭಾಲ್ಕಿ ಕ್ಷೇತ್ರದಿಂದ ಈಶ್ವರ್ ಖಂಡ್ರೆ ಹಾಗೂ ಯಮಕನಮರಡಿಯಿಂದ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಇತ್ತೀಚೆಗಷ್ಟೇ ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ್ ಪುತ್ರನಿಗೆ ಅವಕಾಶ ಕಲ್ಪಿಸಲಾಗಿದೆ. ನಂಜನಗೂಡು ಎಸ್ಸಿ ಕ್ಷೇತ್ರಕ್ಕೆ ದರ್ಶನ್ ಧ್ರುವನಾರಾಯಣ್ಗೆ ಟಿಕೆಟ್ ನೀಡಲಾಗಿದೆ. ಅಫಜಲ್ಪುರದಲ್ಲಿ ಹಾಲಿ ಶಾಸಕ ಎಂವೈ ಪಾಟೀಲ್ಗೆ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಈ ಸಾರಿ ಪುತ್ರನಿಗೆ ಟಿಕೆಟ್ ನೀಡುವಂತೆ ಅವರು ಕೇಳಿದ್ದರು. ಆದರೆ ಕ್ಷೇತ್ರದಿಂದ 8 ಮಂದಿ ಆಕಾಂಕ್ಷಿಗಳಿದ್ದಾರೆ.