ಬೆಂಗಳೂರು: ಕಾಂಗ್ರೆಸ್ ನಾಯಕರು ಇಂದು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟ ಸಂದರ್ಭ ಮತ್ತೊಮ್ಮೆ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಅಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾನುವಾರ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಕೆಎಸ್ಆರ್ಟಿಸಿ) ಭೇಟಿ ನೀಡಿ ಪ್ರಯಾಣಿಕರ ಪರಿಸ್ಥಿತಿ ಹಾಗೂ ಅವರಿಗೆ ಕಲ್ಪಿಸಲಾಗಿರುವ ಬಸ್ ವ್ಯವಸ್ಥೆಯನ್ನು ಅವಲೋಕಿಸಿದರು.
ಸಾಮಾಜಿಕ ಅಂತರ ಮರೆತ ಕಾಂಗ್ರೆಸ್ ನಾಯಕರು ಈ ಸಂದರ್ಭ ಸಾಮಾಜಿಕ ಅಂತರ ಕಾಪಾಡದಿರುವ ವಾತಾವರಣ ಗೋಚರಿಸಿತು. ನಿನ್ನೆ ತಾನೇ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿಕೊಟ್ಟು, ಮಾಸ್ಕ್ ಧರಿಸದೆ, ನೂರಾರು ವಲಸೆ ಕಾರ್ಮಿಕರ ಜೊತೆ ಕುಳಿತು ಮಾತನಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಾಮಾಜಿಕ ಅಂತರ ಮರೆತು ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು. ಆದರೆ ಇದರ ಎರಡನೇ ಭಾಗ ಎಂಬಂತೆ ಇಂದು ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಗುಂಪಾಗಿ ತೆರಳಿದ್ದು, ಅಲ್ಲಿ ತಮ್ಮ ಊರುಗಳಿಗೆ ತೆರಳಲು ಬಸ್ಗಾಗಿ ಕಾದಿದ್ದ ವಲಸೆ ಕಾರ್ಮಿಕರು ಹಾಗೂ ಇತರರನ್ನು ಭೇಟಿ ಮಾಡಿ ಅಹವಾಲು ಕೇಳಿದ್ದಾರೆ.
ಈ ಸಂದರ್ಭ ಕಾಂಗ್ರೆಸ್ ನಾಯಕರು ಮಾಸ್ಕ್ ಧರಿಸಿದ್ದರು. ಆದರೆ ಇವರ ಬಳಿ ಮಾತನಾಡಲು ಗುಂಪು-ಗುಂಪಾಗಿ ಸೇರಿದ್ದ ನಾಗರಿಕರಲ್ಲಿ ಹೆಚ್ಚಿನವರು ಮಾಸ್ಕ್ ಧರಿಸದಿರುವುದು ಕಂಡುಬಂತು. ಕೊರೊನಾ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ಮಹಾನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ಈ ಸಂದರ್ಭ ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕಾರ್ಯಕ್ಕೆ ಕಾಂಗ್ರೆಸ್ನಿಂದ ನಿರಂತರವಾಗಿ ಅಸಹಕಾರ ವ್ಯಕ್ತವಾಗುತ್ತಲೇ ಬಂದಿದೆ. ಯಾವುದೇ ಶಿಸ್ತನ್ನು ಪಕ್ಷ ಪಾಲಿಸುತ್ತಿಲ್ಲ ಎಂಬ ಆರೋಪ ಹೆಚ್ಚಾಗಿ ಕೇಳಿಬರುತ್ತಿದೆ. ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರ ನಡುವಳಿಕೆ ಇದಕ್ಕೆ ಪೂರಕವೆಂಬಂತೆ ಗೋಚರಿಸಿದೆ.
ಅಲ್ಲದೇ, ತೆರಳುತ್ತಿದ್ದ ಬಸ್ ಒಳಗೆ ಪ್ರವೇಶಿಸಿ ಪ್ರಯಾಣಿಕರನ್ನು ಮಾತನಾಡಿಸಿ ಹಾಗೂ ಪರಿಶೀಲನೆ ಮಾಡುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡಿದರು. ಜೊತೆಗೆ ಪ್ರಯಾಣಿಕರಿಗೆ ಆಹಾರದ ಪೊಟ್ಟಣವನ್ನು ಕೂಡಾ ವಿತರಿಸಿದರು. ಜನರ ಬಗ್ಗೆ ಸಾಕಷ್ಟು ಕಾಳಜಿ ವ್ಯಕ್ತಪಡಿಸುವ ಸಂದರ್ಭ ಸಾಮಾಜಿಕ ಅಂತರವನ್ನು ಕಾಂಗ್ರೆಸ್ ನಾಯಕರು ಮರೆತಿದ್ದು ನಿಜಕ್ಕೂ ವಿಪರ್ಯಾಸ.