ಬೆಂಗಳೂರು: ರಾಜ್ಯ ಸರ್ಕಾರ ರೈತರ ಟ್ರ್ಯಾಕ್ಟರ್ ರ‍್ಯಾಲಿಯನ್ನು ತಡೆದಿರುವುದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಪೊಲೀಸರನ್ನು ಬಳಸಿ ರ‍್ಯಾಲಿಯನ್ನು ತಡೆದಿದೆ. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಪೊಲೀಸ್ ಇಲಾಖೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಟ್ರ್ಯಾಕ್ಟರ್ ಮೂಲಕ ರ‍್ಯಾಲಿ ನಡೆಸುವುದಾಗಿ ರೈತರು ದಿಢೀರ್ ಘೋಷಣೆ ಮಾಡಿಲ್ಲ. ಮೊದಲಿನಿಂದಲೂ ಹೇಳಿಕೊಂಡೇ ಬಂದಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೂಡ ಅವರು ಮನವಿ ಮಾಡಿ ಪರವಾನಗಿ ಕೇಳಿದ್ದಾರೆ. ಆದರೆ ಎಲ್ಲಾ ಸಿದ್ಧತೆ ನಡೆಸಿಕೊಂಡು ಕಡೆಯ ಗಳಿಗೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿರುವುದು ಸರಿಯಲ್ಲ.
ಕೇಂದ್ರ ಸರ್ಕಾರ ರೈತ ವಿರೋಧಿ ಮೂರು ಕಾನೂನುಗಳನ್ನು ಜಾರಿಗೆ ತಂದಿದ್ದು, ಇದನ್ನು ನಾವು ಸಂಸತ್ನಲ್ಲಿ ಸರ್ವ ಪಕ್ಷಗಳು ತೀವ್ರವಾಗಿ ಖಂಡಿಸಿದ್ದೇವೆ. ರೈತರು ರೊಚ್ಚಿಗೆದ್ದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅವರನ್ನು ಹಾಗೂ ಅವರ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡಲಾಗುತ್ತಿದೆ.
ಓದಿ:ಪರೇಡ್ ಎಫೆಕ್ಟ್ : ಆಲೂಗಡ್ಡೆ ತುಂಬಿದ ಟ್ರ್ಯಾಕ್ಟರ್ಗೂ ಸಿಗಲಿಲ್ಲ ಬೆಂಗಳೂರು ಪ್ರವೇಶಕ್ಕೆ ಅನುಮತಿ
ಕೇಂದ್ರ ಸರ್ಕಾರ ರೈತರ ಸಮಸ್ಯೆಯನ್ನು ಬಗೆಹರಿಸುವ ಬದಲು ದಬ್ಬಾಳಿಕೆ ಮಾಡುವ ಕಾರ್ಯ ಮಾಡುತ್ತಿದೆ. ಕಾನೂನಿನ ಹೆದರಿಕೆಯನ್ನು ತೋರಿಸಿ ರೈತರನ್ನು ಹೋರಾಟದಿಂದ ದೂರ ಇಡುವ ಕಾರ್ಯ ಮಾಡಲಾಗುತ್ತಿದೆ. ಈ ರೀತಿ ಹೋರಾಟ ಹತ್ತಿಕ್ಕುವ ಮೂಲಕ ರೈತರನ್ನು ಬೆದರಿಸಲು ಸಾಧ್ಯ ಎಂದು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅಂದುಕೊಂಡಿದ್ದರೆ ಅದು ಅವರ ತಪ್ಪು ಗ್ರಹಿಕೆ ಎಂದರು.
ರೈತರು ಈಗಾಗಲೇ ತಮ್ಮ ಹೋರಾಟವನ್ನು ನಿರ್ಧರಿಸಿ ಬಿಟ್ಟಿದ್ದಾರೆ. ಏನೇ ಆದರೂ ರೈತರ ಹೋರಾಟ ನಿಲ್ಲುವುದಿಲ್ಲ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಕೂಡ ಅವರ ಬೆಂಬಲಿಸುತ್ತೇವೆ ಎಂದು ವಿವರಿಸಿದರು.
ಪ್ರಜಾಪ್ರಭುತ್ವದ ಕಗ್ಗೊಲೆ:
ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ದೇಶದ ಎಲ್ಲ ವರ್ಗದ ಜನ ಬೀದಿಗಿಳಿದು ಹೋರಾಡುವಂತಹ ಅನಿವಾರ್ಯತೆ ಎದುರಾಗಿದೆ. ಇಂದು ಜನರ ಪರ ಹೋರಾಡುವುದು ಸಹಮತ ರಾಜಕೀಯ ಪಕ್ಷಗಳ ಆದ್ಯ ಕರ್ತವ್ಯ.
ಅನ್ನದಾತ ಇಂದು ತನ್ನ ರಕ್ಷಣೆಗೋಸ್ಕರ ಬೀದಿಗಿಳಿದು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ. ರೈತರ ಹೋರಾಟವನ್ನು ತಡೆಗಟ್ಟಲು ಈ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ನಗರದೊಳಗೆ ಬರಲು ಟ್ರ್ಯಾಕ್ಟರ್ ಮೂಲಕ ಆಗಮಿಸಿದ ರೈತರನ್ನು ನಿನ್ನೆ ರಾತ್ರಿಯಿಂದಲೇ ತಡೆಯಲಾಗಿದೆ. ರೈತರನ್ನು ಹೆದರಿಸುವ ಕಾರ್ಯ ಇಡೀ ದೇಶದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ರೈತರ ಹೋರಾಟದ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನವನ್ನು ಯಾವ ಸರ್ಕಾರವೂ ಮಾಡಬಾರದು. ಇದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ. ನಾವೆಲ್ಲ ರೈತರ ಪರವಾಗಿ ನಿಲ್ಲುತ್ತೇವೆ ಪಕ್ಷದ ಕಾರ್ಯಕರ್ತರಿಗೆ ನಾನು ಈ ಮೂಲಕ ಕರೆ ಕೊಡುತ್ತಿದ್ದು, ರೈತರಿಗೆ ತೊಂದರೆಯಾಗುತ್ತಿದ್ದರೆ ನೀವು ರಕ್ಷಣೆಗೆ ಧಾವಿಸಿ ಎಂದು ಸೂಚನೆ ಕೊಡುತ್ತೇನೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಡಿಕೆಶಿ ಗುಡುಗಿದರು.