ಕರ್ನಾಟಕ

karnataka

ETV Bharat / state

ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ: ಮಾಜಿ ಸಿಎಂ ಬೊಮ್ಮಾಯಿ‌ - ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ನಾವು ಯಾವತ್ತೂ ಪೊಲೀಸ್​ ಇಲಾಖೆಯನ್ನು ಕೇಸರೀಕರಣ ಮಾಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

Former CM Basavaraja bommai
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : May 24, 2023, 1:29 PM IST

ಬೆಂಗಳೂರು: ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್​ ಅವರ ಸಮ್ಮುಖದಲ್ಲಿ ನಡೆದ ಹಿರಿಯ ಪೊಲೀಸ್​ ಅಧಿಕಾರಿಗಳ ಸಭೆಯಲ್ಲಿ ಸಿಎಂ ಹಾಗೂ ಡಿಸಿಎಂ ಪೊಲೀಸರಿಗೆ ಎಚ್ಚರಿಕೆ ನೀಡುವ ಹೇಳಿಕೆ ನೀಡಿದ್ದಾರೆ. ಕೇಸರೀಕರಣ ಮಾಡುವ ಅವಕಾಶ ಕೊಡಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಉತ್ತಮ ಹೆಸರು ಮಾಡಿದೆ. ಆದರೆ ಇವರು ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ನಮ್ಮ‌ ಪೊಲೀಸರು ಕೇಸರಿಕರಣ ಯಾವತ್ತೂ ಮಾಡಿಲ್ಲ. ಅವರ ಅಜೆಂಡಾ ಜಾರಿ ಮಾಡಲು ಈ ರೀತಿ ತೀರ್ಮಾನ ಮಾಡಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡಲು ಮೊದಲ ದಿನದಿಂದಲೇ ಕಾಂಗ್ರೆಸ್ ಮುಂದಾಗಿದೆ ಎಂದು ಬೊಮ್ಮಾಯಿ‌ ಆರೋಪಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್​​​ಗಿರಿಗೆ ಅಂತ್ಯ ಹಾಡುತ್ತೇವೆ: ಸಿಎಂ ಸಿದ್ದರಾಮಯ್ಯ

ನಂತರ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ನಿನ್ನೆ ಸಿಎಂ, ಡಿಸಿಎಂ ಆಡಿರುವ ಮಾತು ಇಡೀ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ಸೀಕರಣ ಮಾಡಲು ಹೊರಟಂತಿದೆ. ಪೊಲೀಸ್ ಇಲಾಖೆ ಒಂದು ಪಕ್ಷದ ಪರವಾಗಿ ಕೆಲಸ ಮಾಡಲು ಬರಲ್ಲ, ಬಿಜೆಪಿ ಕಾಲದಲ್ಲಿ ನಾವು ಪೊಲೀಸರ ಕೆಲಸದಲ್ಲಿ ಮೂಗು ತೂರಿಸಿರಲಿಲ್ಲ, ಇಂತ ಧರ್ಮದ ಪರ ಅಥವಾ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಯಾವತ್ತೂ ಹೇಳಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದವರು ಈಗ ಧರ್ಮದ ಆಧಾರದಲ್ಲಿ ಕೆಲಸ ಮಾಡಲು ಸೂಚಿಸಿದ್ದಾರೆ. ಕೇಸರಿಕರಣ ಪದ ಬಳಕೆ ಮಾಡಿದ್ದಾರೆ. ಧರ್ಮದ ಆಧಾರದಲ್ಲಿ ಪೊಲೀಸರು ಕೆಲಸ ಮಾಡಬಾರದು, ಕಾನೂನು ಪ್ರಕಾರ ಕೆಲಸ ಮಾಡಬೇಕು ಎಂದರು.

ಈಗ ಇವರು ಪಿಎಸ್ಐ ಹಗರಣ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಪ್ರಕರಣ ಬೆಳಕಿಗೆ ಬಂದಾಗ ನಾವೇ ಕ್ರಮ ವಹಿಸಿದ್ದೇವೆ. ಆರೋಪಿಗಳ ಬಂಧಿಸಿದ್ದೇವೆ. ಈಗ ಇವರು ಬೇಕಾದ್ದು ತನಿಖೆ ಮಾಡಲಿ ಎಂದು ಸವಾಲು ಹಾಕಿದರು.

ನಿನ್ನೆ ನಡೆದ ಹಿರಿಯ ಪೊಲೀಸ್​ ಅಧಿಕಾರಿಗಳ ಸಭೆಯಲ್ಲಿ, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್​ ಅವರು ರಾಜ್ಯದಲ್ಲಿ ಧರ್ಮಾತೀತವಾಗಿ ಪೊಲೀಸರು ಕಾರ್ಯ ನಿರ್ವಹಿಸಬೇಕು. ರಾಜ್ಯದಲ್ಲಿ ಇನ್ನು ನೈತಿಕ ಪೊಲೀಸ್​ಗಿರಿಗೆ ಅವಕಾಶವಿಲ್ಲ. ಪೊಲೀಸರು ಜನಸ್ನೇಹಿಯಾಗಿದ್ದು, ದೂರು ನೀಡಲು ಬಂದವರ ಜೊತೆ ಸೌಜನ್ಯವಾಗಿ ನಡೆದುಕೊಳ್ಳಬೇಕು. ಜನರು ಕೆಲವೊಂದು ನಿರೀಕ್ಷೆ ಇಟ್ಟುಕೊಂಡು ಈ ಬಾರಿ ಬಹುಮತ ನೀಡುವ ಮೂಲಕ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಯನ್ನು ನಾವು ಈಡೇರಿಸಬೇಕಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ:ಕೇವಲ ಸೂಚನೆ ಕೊಡುವುದಿಲ್ಲ, ಎಚ್ಚರಿಕೆ ಕೊಡ್ತಾ ಇದ್ದೇನೆ: ಡಿಸಿ, ಸಿಇಒಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್​ ವಾರ್ನಿಂಗ್​

ABOUT THE AUTHOR

...view details