ಬೆಂಗಳೂರು :ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿಯನ್ನು ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸದಾಶಿವನಗರದ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ಕೈ ಮುಖಂಡರು, ಮಾಧ್ಯಮಗಳ ಜೊತೆ ಮಾತನಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಸಿಬಿಐ ದಾಳಿ ನಡೆದಿದೆ. ಒಟ್ಟು 14 ಕಡೆ ಸಿಬಿಐ ದಾಳಿ ಆಗಿದೆ. ಇದು ರಾಜಕೀಯ ಪ್ರೇರಿತ ದಾಳಿ. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸಿಬಿಐಗೆ ಕಂಡಿಲ್ಲ. ಆರ್‌ಟಿಜಿಎಸ್ ಮೂಲಕ ಹಣ ತೆಗೆದುಕೊಳ್ಳುತ್ತಿದ್ದಾರೆ, ಅದು ಸಿಬಿಐ, ಐಟಿ ಹಾಗೂ ಇಡಿ ತನಿಖಾ ಸಂಸ್ಥೆಗಳಿಗೆ ಗೊತ್ತಿಲ್ಲ. ಅದರ ಬಗ್ಗೆ ಮೊದಲು ತನಿಖೆ ನಡೆಸಲಿ. ಚುನಾವಣೆ ಸಮಯದಲ್ಲೇ ದಾಳಿ ನಡೆಯುತ್ತಿರುವುದು ಯಾಕೆ ಎಂದು ರಾಜ್ಯದ ಜನರಿಗೆ ಗೊತ್ತಾಗಲ್ವಾ?.ಇದಕ್ಕೆ ಜನ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದರು.
ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು ಡಿಕೆಶಿ ಪರ ವಕೀಲ ಪೊನ್ನಣ್ಣ ಮಾತನಾಡಿ, ನಮಗೆ ಸಿಬಿಐನಿಂದ ಯಾವುದೇ ರೀತಿಯ ನೋಟಿಸ್, ಸಮನ್ಸ್ ಬಂದಿಲ್ಲ. ಯಾವುದೇ ಹಣ ವಶ ಪಡಿಸಿಕೊಂಡಿಲ್ಲ. ಕಾನೂನಾತ್ಮಕ ಏನೆಲ್ಲಾ ದಾಖಲೆಗಳು ಬೇಕೋ ಎಲ್ಲವೂ ಸಿದ್ಧವಿದೆ. ಸಮನ್ಸ್ ನೀಡಿದ ನಂತರ ವಿಚಾರಣೆಗೆ ಹಾಜರಾಗುವ ಕುರಿತು ಚರ್ಚಿಸುತ್ತೇವೆ. ಸದ್ಯಕ್ಕೆ ಯಾವುದೇ ರೀತಿಯ ಗೊಂದಲಗಳು ಇಲ್ಲ. ಕಾನೂನು ಹೋರಾಟಕ್ಕೆ ನಾವು ಸಿದ್ದರಿದ್ದೇವೆ ಎಂದರು.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಿನ್ನೆ ನಡೆದ ಸಿಬಿಐ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ. ಚುನಾವಣೆ ಹತ್ತಿರ ಬಂದಾಗ ಇದು ನಡೆಯುತ್ತಲೇ ಇದೆ. ಹೊಸ ಪ್ರವೃತ್ತಿ ಪ್ರಾರಂಭವಾಗಿದೆ, ವಿಪಕ್ಷಗಳು ಎಲ್ಲಿ ಪ್ರಶ್ನೆ ಕೇಳುತ್ತೇವೋ, ಅಲ್ಲಿ ದಾಳಿ ನಡೆಯುತ್ತೆ. ಡಿ ಕೆ ಶಿವಕುಮಾರ್ ಅಧ್ಯಕ್ಷರಾದ ಬಳಿಕ ಸರ್ಕಾರದ ವಿರುದ್ಧ ಹೋರಾಟ ರೂಪಿಸುತ್ತಿದ್ದಾರೆ. ನಮ್ಮ ಪರ ಒಲವಿದೆ ಅನ್ನೋ ಕಾರಣಕ್ಕೆ ಈ ದಾಳಿ ನಡೆದಿದೆ. ಸಿಎಂ ಕುಟುಂಬದ ಭ್ರಷ್ಟಾಚಾರ ಮರೆಮಾಚಲು ಇಂತಹ ದಾಳಿ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬಸ್ಥರು ಅಕ್ರಮ ಎಸಗಿದ್ದಾರೆ. ಇದರ ಬಗ್ಗೆ ಸಿಬಿಐ, ಐಟಿ ಯಾಕೆ ಪ್ರಕರಣ ದಾಖಲಿಸಿಲ್ಲ. ಏಳೂವರೆ ಕೋಟಿ ಆರ್‌ಟಿಜಿಎಸ್ ಆಗಿದೆ. ಸುಮೊಟೊ ಅಡಿ ಪ್ರಕರಣ ದಾಖಲಿಸಿ ಯಾಕೆ ತನಿಖೆ ಮಾಡಿಲ್ಲ. ನಾವು ಇದನ್ನೇ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ. ಬಿಜೆಪಿಯವರು ಏನು ಮಾಡಿದ್ರೂ, ಏನೂ ಆಗಲ್ಲ ಎಂದು ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸಿ ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿನ್ ಮಿಗಾ, ಡಿ.ಕೆ ಶಿವಕುಮಾರ್ ಬಗ್ಗೆ ಸಿಟಿ ರವಿ ಬೇಕಾಬಿಟ್ಟಿ ಮಾತಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ತಮ್ಮ ಭೂಮಿಯಲ್ಲಿ ಆಲೂಗಡ್ಡೆ ಬೆಳೀತಾರ, ಇಲ್ಲ ಚಿನ್ನ ಬೆಳೀತಾರಾ? ಎಂದು ಕೇಳಿದ್ದಾರೆ. ಸಿ ಟಿ ರವಿಯವರು ಚಿಕ್ಕಮಗಳೂರಲ್ಲಿ ಏನ್ ಬೆಳೀತಾರೆ? ಸಿ ಟಿ ರವಿ ಕಾಫಿ ಬೆಳೆಯುತ್ತಾರಾ, ಇಲ್ಲ ವಜ್ರ ಬೆಳೀತಾರಾ ಎಂದು ಪ್ರಶ್ನಿಸಿದರು.