ಬೆಂಗಳೂರು: ಕುಮಾರಸ್ವಾಮಿ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಪೆನ್ಡ್ರೈವ್ ಇಟ್ಟುಕೊಂಡಿದ್ದೇನೆ ಅನ್ನೋದು ಸುಮ್ಮನೆ ಜೋಬಲ್ಲಿ ಇಟ್ಕೊಳ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಭಾರತ್ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಬರೀ ಸುಳ್ಳು ಆರೋಪ ಮಾಡ್ತಾರೆ ಎಂದಿದ್ದಾರೆ.
ಇವರ ಕಾಲದಲ್ಲಿ ವರ್ಗಾವಣೆ ಆಗಿಲ್ಲವಾ?. ಹೊಸ ಸರ್ಕಾರ ಬಂದಾಗ ಸಹಜವಾಗಿನೇ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಆಗುತ್ತದೆ. ಪೆನ್ಡ್ರೈವ್ ಇಟ್ಟುಕೊಂಡಿದ್ದೇನೆ ಅನ್ನೋದು, ಅದನ್ನು ಕಿಸೆಯಿಂದ ತೆಗೆದು ತೋರಿಸುವುದು ಬೇರೆ. ಬರೀ ಸುಳ್ಳು ಆರೋಪ ಮಾಡುವುದು. ತನಿಖೆ ಶುರುವಾಗುತ್ತಿದ್ದಂತೆ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ವರದಿ ಬರಲಿ, ಎಲ್ಲವೂ ಗೊತ್ತಾಗಲಿದೆ. ತನಿಖಾ ವರದಿ ಬರಲಿ, ಅವರ ಬಂಡವಾಳ ಎಲ್ಲ ಬಯಲಾಗುತ್ತದೆ ಎಂದು ಸಿಎಂ ವಾಗ್ದಾಳಿ ನಡೆಸಿದರು.
34 ವರ್ಷಗಳ ಬಳಿಕ ದೊಡ್ಡ ಮಟ್ಟದಲ್ಲಿ ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ಇತಿಹಾಸ ನೋಡಿದರೆ ಬಿಜೆಪಿ 35-36%ಗಿಂತ ಹೆಚ್ಚು ಮತಪಾಲು ಗಳಿಸೇ ಇಲ್ಲ. ಜೆಡಿಎಸ್ನವರು ಪಂಚ ರತ್ನ ಹೇಳಿ ಇಡೀ ರಾಜ್ಯದಲ್ಲಿ ಓಡಾಡಿ ಭ್ರಮೆ ಹುಟ್ಟಿಸುವ ಕೆಲಸ ಮಾಡಿದ್ದರು. ಅವರನ್ನು ರಾಜ್ಯದ ಜನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಮೋದಿ ಬಂದರೆ ಗೆಲ್ಲುತ್ತೇವೆ ಎಂಬುದು ಬಿಜೆಪಿಯವರ ಆಶಾಭಾವನೆ ಆಗಿತ್ತು. ಆದರೆ ರಾಜ್ಯದ ಜನರು ಬುದ್ಧಿವಂತರು. ಅವರ ಎಲ್ಲಾ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದ್ದಾರೆ.
ಭಾರತ್ ಜೋಡೋ ಮಾಡಿದಲ್ಲಿ ನಾವು ಗೆದ್ದಿದ್ದೇವೆ:28 ಬಾರಿ ಪ್ರಧಾನಿ ಮೋದಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ಮೋದಿ ಎಲ್ಲಿ ರೋಡ್ ಶೋ, ಸಮಾವೇಶ ಮಾಡಿದ್ದರು ಅಲ್ಲು ಬಿಜೆಪಿ ಸೋತಿದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಭಾರತ್ ಜೋಡೋ ಮಾಡಿದ್ದಾರೆ, ಅಲ್ಲಿ ನಾವು ಬಹುತೇಕ ಕಡೆ ಗೆದ್ದಿದ್ದೇವೆ. ಇದು ಮೋದಿ ರೋಡ್ ಶೋ ಮತ್ತು ರಾಹುಲ್ ಗಾಂಧಿ ಭಾರತ್ ಜೋಡೋ ನಡುವಿನ ವ್ಯತ್ಯಾಸ ಆಗಿದೆ ಎಂದು ವಿವರಿಸಿದರು. ರಾಜ್ಯದ ಈ ಫಲಿತಾಂಶದಿಂದ ಇಡೀ ದೇಶದಲ್ಲಿ ಸಂಚಲನ ಆರಂಭವಾಗಿದೆ. ಎಲ್ಲರಲ್ಲೂ ಒಂದು ವಿಶ್ವಾಸ ಮೂಡಿದೆ. ಎಲ್ಲಾ ರಾಜ್ಯಗಳಲ್ಲಿ ಒಂದು ವೈಬ್ರೇಷನ್ ಆರಂಭವಾಗಿದೆ. ಆ ಕೀರ್ತಿ ನಮ್ಮ ರಾಜ್ಯದ ಜನರಿಗೆ ಸಿಗಬೇಕು. ಜನರು ಬಹಳ ನಿರೀಕ್ಷೆ ಇಟ್ಟಿದ್ದಾರೆ. ಬಿಜೆಪಿ ಸರ್ಕಾರದಿಂದ ಜನ ಬೇಸತ್ತು ಹೋಗಿದ್ದರು ಅಂತಾ ಸಿಎಂ ಟೀಕಿಸಿದರು.