ಬೆಂಗಳೂರು: ಲೀಸ್ ಕಂ ಸೇಲ್ ಅಂದರೆ ಹೊಸ ಸರ್ಕಾರ ಬಂದಾಗ ಮಾರಾಟ ಮಾಡಲಿ ಎನ್ನುವುದಲ್ಲ ಲೀಸ್ ಮುಂದುವರೆಸಿಕೊಂಡು ಹೋಗಲಿ ಎನ್ನುವುದು ಎಂದು ಮೈತ್ರಿ ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಡಬ್ಬಲ್ ಸ್ಟ್ಯಾಂಡರ್ಡ್, ಗೋಸುಂಬೆ ಸಿಎಂ.. ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ - kannadanews
ಮೈತ್ರಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಗೈದಿರುವ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಕುಮಾರಸ್ವಾಮಿಯವರನ್ನು ಗೋಸುಂಬೆ ಮುಖ್ಯಮಂತ್ರಿ ಎಂದು ಟೀಕೆ ಮಾಡಿದ್ದಾರೆ.
ನಗರದ ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಬಿಜೆಪಿ ಧರಣಿಯಲ್ಲಿ ಮಾತನಾಡಿದ ಅವರು, ಲೀಸ್ ಕಂ ಸೇಲ್ ಅಂದರೆ ಅವಧಿಮುಗಿದ ನಂತರ ಲೀಸ್ ಮುಂದುವರೆಸಲಿ ಎಂದು ಅಷ್ಟೇ, ಜಿಂದಾಲ್‌ಗೆ 3667 ಎಕರೆ ಭೂಮಿಯನ್ನು ಹತ್ತು ವರ್ಷ ಲೀಸ್‌ಗೆ ನೀಡಿದ್ದೆವು. ಆದರೆ, ನಾವು ಲೀಸ್ ಕಮ್ ಸೇಲ್ ಕೊಟ್ಟರೆ ನೀವು ಶುದ್ಧ ಕ್ರಯ ಪತ್ರ ಮಾಡಿ ಮಾರಾಟಕ್ಕೆ ಹೊರಟಿದ್ದೀರಾ ಎಂದು ಕಿಡಿಕಾರಿದರು. ಯಾವಾಗ ಡಿ ಕೆ ಶಿವಕುಮಾರ್ ಬಳ್ಳಾರಿ ಉಸ್ತುವಾರಿ ಆದರೋ ಆಗಲೇ ಅಲ್ಲಿ ಗೋಲ್‌ಮಾಲ್ ನಡೆಯುತ್ತೆ ಅನ್ನುವುದು ಗೊತ್ತಿತ್ತು. ಈಗ ಅದು ಸಾಬೀತಾಗಿದೆ. ಡಿ ಕೆ ಶಿವಕುಮಾರ್, ಕೆ ಜೆ ಜಾರ್ಜ್, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ನಿಮಗೆಷ್ಟು ಲಾಭ ಆಗಿದೆ ಎಂದು ಹೇಳಬೇಕು ಎಂದು ಆಗ್ರಹಿಸಿದರು. ತಾವು ಆಡಳಿತಕ್ಕೆ ಬಂದ 24ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದ ಕುಮಾರಸ್ವಾಮಿಯವರು ಈಯವರಗೆ ಒಬ್ಬನೇ ಒಬ್ಬ ರೈತನ ಸಾಲ ಮನ್ನಾ ಮಾಡಿಲ್ಲ. ಚುನಾವಣೆ ಆದ ತಕ್ಷಣ ಬ್ಯಾಂಕಿಗೆ ಕೊಟ್ಟ ಹಣವನ್ನೂ ವಾಪಸ್ ಪಡೆದು ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಗೆ ಮುನ್ನ ಹುಬ್ಬಳ್ಳಿಯಲ್ಲಿ ಸಿಎಂ ಮನೆ ಮಾಡಿದ್ದರು. ಈಗ ಆ ಮನೆ ಏನಾಯ್ತು. ಇವರು ಡಬ್ಬಲ್ ಸ್ಟಾಂಡರ್ಡ್ ಮುಖ್ಯಮಂತ್ರಿ. ಗೋಸುಂಬೆ ಮುಖ್ಯಮಂತ್ರಿ. ಇವರು ಹಾಸನ ಮತ್ತು ಮಂಡ್ಯಕ್ಕೆ ಸೀಮಿತ. ನಾವು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಕೈ ಕಾಲು ಹಿಡಿದು ಸಿಆರ್‌ಎಫ್ ಫಂಡ್ ತಂದರೆ ಈಯವರಗೆ ಲೋಕೋಪಯೋಗಿ ಸಚಿವ ರೇವಣ್ಣ ಟೆಂಡರ್ ಕರೆದಿಲ್ಲ. ಗಡ್ಕರಿಯವರು ಕರೆದು ತಾಕೀತು ಮಾಡಿದ್ರೂ ರೇವಣ್ಣ ಹಾಸನ ಬಿಟ್ಟು ಬೇರೆ ಜಿಲ್ಲೆಗಳ ಕಡೆ ಗಮನಹರಿಸಿಲ್ಲ ಎಂದರು. ಇನ್ನು ಐಎಂಎ ದೋಖಾ ಪ್ರಕರಣ ಕುರಿತು ಮಾತನಾಡಿದ ಶೋಭಾ ಕರಂದ್ಲಾಜೆ, ಕರ್ನಾಟಕದ ಹಲವು ಪೊಲೀಸ್ ಅಧಿಕಾರಿಗಳು ಮನ್ಸೂರ್ ಜತೆ ಕೂತು ಬಿರಿಯಾನಿ ತಿನ್ನುತ್ತಾರೆ. ಜಮೀರ್ ಅಹಮದ್ ಕೂಡ ಮನ್ಸೂರ್ ಜತೆ ಶಾಮೀಲಾಗಿದ್ದಾರೆ. ಹಾಗಾಗಿಯೇ ಈ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ವಹಿಸಿ. ಇವರ ಹಿಂದೆ ಇರುವ ಭಯೋತ್ಪಾದಕ ಸಂಘಟನೆಯ ಪಾತ್ರವೂ ಗೊತ್ತಾಗಬೇಕು ಎಂದು ಒತ್ತಾಯಿಸಿದರು.