ಬೆಂಗಳೂರು: "ಪೊಲೀಸರನ್ನು ಕಾಂಗ್ರೆಸ್ಸೀಕರಣ ಮಾಡುವ ಪ್ರಯತ್ನವನ್ನು ನಿನ್ನೆಯ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಕರ್ನಾಟಕದ ಪೊಲೀಸ್ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಧರ್ಮ, ಜಾತಿ ಆಧಾರದ ಮೇಲೆ ಯಾರೂ ಏನೂ ಮಾಡುವುದಿಲ್ಲ. ನಿನ್ನೆ ನೀವು ಹೀಗೆಯೇ ಇರಬೇಕು. ನಾವು ಹೇಳಿದಂತೆ ಮಾಡಬೇಕು ಎಂದು ಪೊಲೀಸರಿಗೆ ಒಂದು ತರಹ ಧಮ್ಕಿ ಹಾಕಿದ್ದೀರಿ" ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.
ಅಧಿಕೃತ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾನೂನು ಮೀರಿಯೂ ಇವರು ಹೇಳಿದವರ ಮೇಲೆ ಕೇಸ್ ಹಾಕಬೇಕು. ಇವರು ಹೇಳಿದವರನ್ನು ಬಿಡಬೇಕು. ಹಿಂದೆಯೂ ಕೂಡಾ ಇವರು ಈ ರೀತಿ ಮಾಡಿದ್ದರು. ಪಿಎಫ್ಐ ಸಂಘಟನೆಯನ್ನು ಸಾಕಿ ಬೃಹದಾಕಾರವಾಗಿ ಬೆಳೆಸಿದ್ದರು. ಅದರ ಪರಿಣಾಮ ಇಡೀ ದೇಶ, ರಾಜ್ಯದಲ್ಲಿ ಬೀರಿ ಶಾಂತಿ ಸುವ್ಯವಸ್ಥೆ ಹಾಳಾಗಿತ್ತು. ಯಾವ ಸಮುದಾಯವನ್ನು ತುಷ್ಟೀಕರಣ ಮಾಡಲು ನಿನ್ನೆ ಈ ರೀತಿ ಮಾತಾಡಿದರು ಅಂತಾ ಜನಕ್ಕೆ ಗೊತ್ತಾಗುತ್ತಿದೆ. ಮುಂದೆಯೂ ಕೂಡಾ ಈ ರೀತಿ ಇವರು ಮಾತಾಡ್ತಾರೆ. ಇದು ಅಶ್ಚರ್ಯ ಏನಲ್ಲ" ಎಂದು ಹೇಳಿದರು.
ಪೊಲೀಸರು ಕೇಸರಿ ಶಾಲು ಹಾಕಿದ ಬಗ್ಗೆ ಡಿಸಿಎಂ ಎಚ್ಚರಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, "ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಕೇಸರಿ ಶಲ್ಯನೋ, ಏನೋ ಹಾಕ್ತಾರೆ, ಇವರಿಗೆ ಕೇಸರಿ ಅಲರ್ಜಿ ಇದೆ ಅಂತಾ ಹೇಳಿದರೆ ಇವರು ಕೇಸರಿಯನ್ನೇ ನಿಷೇಧ ಮಾಡಲಿ, ಕೇಸರಿ ಬಣ್ಣವನ್ನೇ ನಿಷೇಧ ಮಾಡಲಿ. ಕೇಸರೀಕರಣ ಅನ್ನುವಂತಹದ್ದು ಎಲ್ಲಿದೆ? ಅವರಿಗೆ ಏನು ಅಲರ್ಜಿ ಹೇಳಲಿ" ಎಂದು ಪ್ರಶ್ನಿಸಿದರು.