ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು, ದಸರಾ ಮತ್ತು ವಿಜಯದಶಮಿ ಹಬ್ಬದ ಶುಭ ಕೋರಿದ್ದಾರೆ. ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿದರು.
ವಿಜಯದಶಮಿ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳುವ ಮುನ್ನ ಯಡಿಯೂರಪ್ಪ ಅವರ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದರು. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶುಭ ಹಾರೈಸಿದ್ದಾರೆ.
ಮಾಜಿ ಸಿಎಂ ಬಿಎಸ್ವೈ ಭೇಟಿಯಾಗಿ ಸನ್ಮಾನಿಸಿದ ಸಿಎಂ ಬೊಮ್ಮಾಯಿ ಬೆಂಗಳೂರು ಉಸ್ತುವಾರಿ ಬಗ್ಗೆ ನಡೆದಿದ್ಯಾ ಚರ್ಚೆ?
ನಂತರ ಉಭಯ ನಾಯಕರು ಕೆಲಕಾಲ ಮಾತುಕತೆ ನಡೆಸಿದರು. ರಾಜ್ಯ ರಾಜಕೀಯ ವಿಚಾರಗಳ ಕುರಿತು ಕೆಲಕಾಲ ಸಮಾಲೋಚನೆ ನಡೆಸಿದರು ಎನ್ನಲಾಗಿದೆ. ಬೆಂಗಳೂರು ಉಸ್ತುವಾರಿಗೆ ಹಿರಿಯ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಹಲವರು ತೀವ್ರ ಪೈಪೋಟಿ ನಡೆಸುತ್ತಿದ್ದು ಬಹಿರಂಗ ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿರುವ ಕುರಿತು ಮಾತುಕತೆ ನಡೆಸಿದರು.
ಬೆಂಗಳೂರು ಉಸ್ತುವಾರಿಯನ್ನು ಯಾರಿಗೆ ಕೊಡಬೇಕು, ಒಬ್ಬ ಸಚಿವರಿಗೆ ನೀಡಬೇಕೋ, ಇಬ್ಬರಿಗೆ ಹಂಚಿಕೆ ಮಾಡಬೇಕೋ ಅಥವಾ ತಮ್ಮ ಬಳಿಯೇ ಇರಿಸಿಕೊಳ್ಳಬೇಕಾ ಎನ್ನುವ ಕುರಿತು ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.
ಬೆಂಗಳೂರು ಉಸ್ತುವಾರಿ ವಿಚಾರದಲ್ಲಿ ಸಚಿವರ ನಡುವೆ ಅಸಮಧಾನ ಏಳಲಿದೆ ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ತಮ್ಮ ಬಳಿಯೇ ಉಸ್ತುವಾರಿ ಉಳಿಸಿಕೊಂಡಿದ್ದರು. ಆದರೆ ಈಗ ಬೊಮ್ಮಾಯಿ ಬೇರೆಯವರಿಗೆ ಹಂಚಿಕೆ ಮಾಡಲು ಮುಂದಾಗಿರುವುದು ಸಚಿವರ ನಡುವೆ ಪೈಪೋಟಿ ಹುಟ್ಟುಹಾಕಿದೆ. ಹಾಗಾಗಿ ಈ ವಿಚಾರದಲ್ಲಿ ಯಡಿಯೂರಪ್ಪರ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.
ಬಿಎಸ್ವೈ ಭೇಟಿಯಾದ ಬಳಿಕ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಈ ವೇಳೆ ಮಾತನಾಡಿದ ಬೊಮ್ಮಾಯಿ, 'ದಸರಾ ಬಳಿಕ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ. ಯಡಿಯೂರಪ್ಪ ಕೂಡ ಅ.20ರ ನಂತರ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದಿದ್ದಾರೆ. ನಾನು ಅ.17 ರಂದು ಹಾನಗಲ್ಗೆ ಹೋಗಿ ಪ್ರಚಾರ ಮಾಡಲಿದ್ದೇನೆ. ನಂತರ ಸಿಂಧಗಿಯಲ್ಲಿ ಪ್ರಚಾರ ಮಾಡುತ್ತೇನೆ' ಎಂದರು.