ಕರ್ನಾಟಕ

karnataka

ETV Bharat / state

ನ್ಯಾಯಾಂಗ ಪ್ರಜಾಪ್ರಭುತ್ವದ ಆಧಾರ ಸ್ತಂಭ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - ಕರ್ನಾಟಕದ ಓಕಾ, ನಾಗರತ್ನ

ನ್ಯಾಯಾಂಗ ಮತ್ತು ಶಾಸಕಾಂಗದ ಮಧ್ಯೆ ಉತ್ತಮ ಸಂಬಂಧ ಇರಬೇಕು. ನ್ಯಾಯಾಂಗವೂ ಸಹ ಒಂದು ಸಂಸ್ಕೃತಿಯೇ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

Supreme Court two judges
Supreme Court two judges

By

Published : Sep 5, 2021, 1:30 AM IST

Updated : Sep 5, 2021, 2:11 AM IST

ಬೆಂಗಳೂರು :ನ್ಯಾಯಾಂಗವು ಪ್ರಜಾಪ್ರಭುತ್ವದ ಆಧಾರ ಸ್ತಂಭ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ ಹಾಗೂ ಬಿ.ವಿ.ನಾಗರತ್ನ ಅವರನ್ನು ಸನ್ಮಾನಿಸಿ ಮಾತನಾಡಿದರು.

ನ್ಯಾಯಮೂರ್ತಿ ಓಕಾ ಅವರಿಗೆ ಅಭಿನಂಧಿಸಿದ ಸಿಎಂ

ನ್ಯಾಯಾಂಗ ಮತ್ತು ಶಾಸಕಾಂಗದ ಮಧ್ಯೆ ಉತ್ತಮ ಸಂಬಂಧ ಇರಬೇಕು. ನ್ಯಾಯಾಂಗವೂ ಸಹ ಒಂದು ಸಂಸ್ಕೃತಿಯೇ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿಗಳು, ಸಂವಿಧಾನವು ಪ್ರಜಾಪ್ರಭುತ್ವದ ಆಧಾರ ಸ್ತಂಭ. ಪ್ರಜಾಪ್ರಭುತ್ವದ ಆಧಾರದ ಮೇಲೆ ಕಲ್ಯಾಣ ರಾಜ್ಯವನ್ನು ಸ್ಥಾಪಿಸಬೇಕೆಂದು ಸಂವಿಧಾನ ರಚಿಸಿದ ನಮ್ಮ ಹಿರಿಯರು ಹೇಳಿದ್ದಾರೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು

ಇದನ್ನೂ ಓದಿರಿ:ಜಾರ್ಖಂಡ್ ವಿಧಾನಸಭೆಯಲ್ಲಿ ನಮಾಜ್​ಗೆ ಪ್ರತ್ಯೇಕ ಕೊಠಡಿ : ಹನುಮಾನ್​ ಚಾಲೀಸಾಗೂ ಬೇಕು ಎಂದ ಶಾಸಕರು

ಇದೊಂದು ಅಪರೂಪದ ಸಮಾರಂಭ:

ಇದೊಂದು ಅಪರೂಪದ ಸಮಾರಂಭ. ಬಹಳಷ್ಟು ಮುಖ್ಯಮಂತ್ರಿಗಳಿಗೆ ಈ ಅವಕಾಶ ಸಿಕ್ಕಿಲ್ಲ. ಕರ್ನಾಟಕದ ಇಬ್ಬರು ಶ್ರೇಷ್ಠ ನ್ಯಾಯಮೂರ್ತಿಗಳು, ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಉನ್ನತ ಹುದ್ದೆಗೆ ಏರಿರುವ ಹೊತ್ತಿನಲ್ಲಿ ಆತ್ಮೀಯವಾಗಿ ಸನ್ಮಾನಿಸುವ ಇಂತಹ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿಗೆ ಸನ್ಮಾನ

ಸರ್ಕಾರ ಏನೇ ಮಾಡಿದ್ರೂ ಅವರಿಗೆ ಕಾಣಿಸುತ್ತದೆ:

ನಾವು ಸರ್ಕಾರ ನಡೆಸುವವರು ಈ ಕಟ್ಟಡದಲ್ಲಿದ್ದೇವೆ (ವಿಧಾನಸೌಧ). ತಾವು ನ್ಯಾಯಾಧೀಶರು ಮುಂದಿನ ಕಟ್ಟಡ ( ಹೈಕೋರ್ಟ್) ನಲ್ಲಿದ್ದೀರಿ. ತುಂಬಾ ದೂರ ಇಲ್ಲ, ನಾವು ಏನೇ ಮಾಡಿದರೂ ಕಾಣುತ್ತದೆ. ನಾವು ನೋಡಿದರೆ ಕೆಂಪುಗೆ ಕಾಣುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಾನು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಕೆಲವು ನಿಯಮ ಉಲ್ಲಂಘನೆಯಾದಾಗ, ಈ ಫೈಲ್ ಕೆಂಪು ಬಿಲ್ಡಿಂಗ್​ಗೆ ಹೋಗುತ್ತದೆ ಎಂದು ನಮ್ಮ ಕಾರ್ಯದರ್ಶಿ ಹೇಳುತ್ತಿದ್ದರು ಎಂದರು.

ಓಕಾ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ತಂದ ಬದಲಾವಣೆ ಗಮನಾರ್ಹ :

ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಪರಸ್ಪರ ಅವಲಂಬನೆ ಇದ್ದು, ಇದರಿಂದ ಎರಡೂ ಸಂಸ್ಥೆಗಳಲ್ಲಿ ಹೊಣೆಗಾರಿಕೆಯನ್ನು ಉಂಟುಮಾಡುತ್ತದೆ. ಅಭಯ್ ಶ್ರೀನಿವಾಸ್ ಓಕಾ ಅವರು ವಿಶಿಷ್ಟ ಹಾಗೂ ಅತ್ಯುತ್ತಮ ಸಾಮರ್ಥ್ಯವುಳ್ಳ ನ್ಯಾಯಮೂರ್ತಿಗಳು, ನ್ಯಾಯಾಂಗ ವ್ಯವಸ್ಥೆಯಲ್ಲಿ ತಂದ ಬದಲಾವಣೆಗಳು ಗಮನಾರ್ಹವಾದುದು. ಅಪರಾಧಿಗಳಿಗೆ ತಿದ್ದಿಕೊಳ್ಳಲು ನೀಡುವ ಅವಕಾಶವೇ ಸೂಕ್ತ ಶಿಕ್ಷೆ ಎನ್ನುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. ಅವರಿದ್ದಲ್ಲಿ ಅಸ್ಪಷ್ಟತೆಗೆ ಅವಕಾಶವಿಲ್ಲ. ಸಹಾನೂಭೂತಿ ಇದ್ದ ನ್ಯಾಯಮೂರ್ತಿಗಳಾಗಿದ್ದ ಅವರು ಸಮಸ್ಯೆಯ ಆಳಕ್ಕೆ ಇಳಿದು, ಸಂಪೂರ್ಣ ಅರಿತು ಅದರ ಮೂಲಕ್ಕೆ ಹೋಗಿ ಬಗೆಹರಿಸುತ್ತಿದ್ದರು. ಅವರು ಸರ್ವೋಚ್ಚ ನ್ಯಾಯಾಲಯದ ಆಸ್ತಿಯಾಗಲಿದ್ದಾರೆ ಎಂದ ಸಿಎಂ. ಕರ್ನಾಟಕದಿಂದ ಸರ್ವೋಚ್ಚ ನ್ಯಾಯಾಲಯದ ಅವರ ಪಯಣ ನೆನಪಿನಲ್ಲಿರಲದೆ ಹಾಗೂ ಕರ್ನಾಟಕ ರಾಜ್ಯ ಅವರನ್ನು ಸದಾ ಸ್ಮರಿಸುತ್ತದೆ ಎಂದು ಹೇಳಿದರು.

ಭಾರತದ ಮುಖ್ಯ ನ್ಯಾಯಾಧೀಶರಾಗಲಿ:

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಉನ್ನತ ಹುದ್ದೆಗೇರಿರುವುದರಿಂದ ಹೃದಯ ತುಂಬಿ ಬಂದಿದೆ ಎಂದ ಬೊಮ್ಮಾಯಿ, ಅತ್ಯಂತ ವಿನಮ್ರ ಹಾಗೂ ಸರಳ ಸ್ವಭಾವದವರು. ಸಾಮಾನ್ಯರು ಅವರನ್ನು ಸುಲಭವಾಗಿ ಮಾತನಾಡಿಸಬಹುದಾಗಿತ್ತು. ಅವರು ಕರ್ನಾಟಕದ ಸಂಸ್ಕಾರವನ್ನು ಪ್ರತಿನಿಧಿಸಲಿದ್ದಾರೆ ಎನ್ನುವುದು ನಮ್ಮ ಹೆಮ್ಮೆ. ನಾಗರಿಕತೆಯೊಂದಿಗೆ ಸಂಸ್ಕೃತಿ ಉಳಿದಾಗ ಮಾತ್ರ ದೇಶ ಸುಭಿಕ್ಷವಾಗುತ್ತದೆ. ಅವರು ಭಾರತದ ಮುಖ್ಯ ನ್ಯಾಯಾಧೀಶರಾಗಲಿ ಎಂದು ಹಾರೈಸಿದರು. ರಾಜ್ಯದ ನ್ಯಾಯಾಲಯಗಳ ಮೂಲಭೂತ ಸೌಕರ್ಯಗಳು ದೇಶದಲ್ಲಿಯೇ ಅತ್ಯುತ್ತಮವಾಗಿದೆ. ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವವನ್ನು ಉಳಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸುಭದ್ರವಾಗಿ ಉಳಿಯಲಿದೆ ಎಂದರು.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮಾತನಾಡಿ, ಕುವೆಂಪು ಹೇಳಿದಂತೆ ಭೂದೇವಿಯ‌ ಮಕುಟದ ನವಮಣಿ. ಕರ್ನಾಟಕದಲ್ಲಿ ನನ್ನ ಜನ್ಮ ನನ್ನ ಪುಣ್ಯ. ಕರ್ನಾಟಕ ‌ಕೌಶಲ್ಯಕ್ಕೆ‌ ಹೆಸರಾಗಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ 4 ಜನ‌ ಕನ್ನಡಿಗರು ಮುಖ್ಯ ನ್ಯಾಯಾಧೀಶರಾಗಿದ್ದಾರೆ. 24 ಜನ‌ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಈ ರಾಜ್ಯ ಭವಿಷ್ಯದಲ್ಲಿ ಅತ್ಯಂತ ಏಳಿಗೆ ಪಡೆಯಲಿದೆ ಎಂದು ಆಶಿಸುತ್ತೇನೆ ಎಂದರು. ನಾನು ಓದು ಮುಗಿಸಿದಾಗ ಏನು ಮಾಡುವುದು ಎಂಬುದು ಗೊತ್ತಿರಲಿಲ್ಲ. ಆಗ ಲಾ ಅಭ್ಯಾಸ ಮಾಡಲೇ ಅಥವಾ ಪ್ರಾಕ್ಟೀಸ್ ಮಾಡಿದಿದ್ದರೆ ಮನೆಯಲ್ಲಿ ಮದುವೆ ಮಾಡುತ್ತಾರೆಂಬ ಭಯ ಇತ್ತು. ಆಗ ನಾನು ಅಭ್ಯಾಸ ಮಾಡುತ್ತೇನೆಂದು ನಮ್ಮ ತಂದೆಗೆ ಹೇಳಿದೆ. ಆಗ ಅವರು ಒಪ್ಪಿದರು. ಆದರೆ ಬೆಂಗಳೂರಿಗೆ ಬರಬೇಕಿತ್ತು. ಒಬ್ಬಳೆ ಮಗಳೆಂದು ತಂದೆ, ತಾಯಿ ಸ್ವಲ್ಪ ಯೋಚನೆ ಮಾಡಿದರು. ಬಳಿಕ ಬೆಂಗಳೂರಿಗೆ ಕಳಿಸಿದರು. ನಂತರ ಲಾ ಅಭ್ಯಾಸ ಮಾಡಿದೆ ಎಂದು ಹಿಂದಿನ ಘಟನೆಯನ್ನು ಮೆಲುಕು ಹಾಕಿದರು.

ಕಾರ್ಯಕ್ರಮದಲ್ಲಿ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸತೀಶ್ ಚಂದ್ರ ಶರ್ಮಾ, ಅಡ್ವೊಕೇಟ್ ಜನರಲ್ ಪ್ರಭುಲಿಂಗ.ಕೆ.ನಾವಡಗಿ , ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.

Last Updated : Sep 5, 2021, 2:11 AM IST

ABOUT THE AUTHOR

...view details