ಬೆಂಗಳೂರು: ದಾನಿಗಳ ಸಹಾಯದಿಂದ ಸೈಕಲ್ ಖರೀದಿಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿರುವ ಗದಗ್ನ ಪವಿತ್ರಾ ಕುರ್ತಕೋಟಿಗೆ 5 ಲಕ್ಷ ರೂ ಮೌಲ್ಯದ ಸೈಕಲ್ ಅನ್ನು ಸಿಎಂ ಬೊಮ್ಮಾಯಿ ಹಸ್ತಾಂತರಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಅಶೋಕ್ ಮತ್ತು ರೇಣುಕಾ ದಂಪತಿ ಪುತ್ರಿ ಕು. ಪವಿತ್ರಾ ಕುರ್ತಕೋಟಿ ಅಂತಾರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ್ದರು. ಆದರೆ, ಆಕೆಯ ಬಳಿ ಉತ್ತಮ ಸೈಕಲ್ ಇರಲಿಲ್ಲ. ಒಳ್ಳೆಯ ಸೈಕಲ್ ತರಿಸಿಕೊಡುವಂತೆ ಈಕೆ, ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಳು.
5 ಲಕ್ಷ ಬೆಲೆಯ ಸೈಕಲ್ ವಿತರಿಸಿದ ಸಿಎಂ ಬೊಮ್ಮಾಯಿ ಈ ಮನವಿ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಬ್ಲಾಸಂ ಆಸ್ಪತ್ರೆ ಮತ್ತು ಮಧುಸೂದನ್ ಅವರ ಸಹಕಾರದೊಂದಿಗೆ Argon-18 E-119 ಸೈಕಲ್ ಅನ್ನು ಖರೀದಿಸಿ ಸಿಎಂ ಮೂಲಕ ಹಸ್ತಾಂತರಿಸಿದ್ದಾರೆ. ಈ ಸೈಕಲ್ ಅನ್ನು ಕೆನಡಾದಿಂದ ತರಿಸಲಾಗಿದ್ದು, ಬರೋಬ್ಬರಿ 5 ಲಕ್ಷ ಬೆಲೆಯದ್ದಾಗಿದೆ.
ಪ್ರಥಮ ಪಿಯುಸಿ ಓದುತ್ತಿರುವ ಪವಿತ್ರಾಳ ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟ ತಯಾರಿಕ ಸಹಾಯಕರಾಗಿದ್ದಾರೆ. ತಂದೆ ರೈತರು. ಹೀಗಿದ್ದರೂ ದಾನಿಗಳ ಸಹಾಯದಿಂದ ಸೈಕಲ್ ಖರೀದಿಸಿ ವಿವಿಧೆಡೆ ಪ್ರಶಸ್ತಿ ಗೆದ್ದು ಗಮನಸೆಳೆದಿದ್ದಳು.
ಪವಿತ್ರಾ ಸೈಕ್ಲಿಂಗ್ ಸ್ಪರ್ಧೆಯ ಸಾಧನೆ
- 2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರೋಡ್ ಸೈಕ್ಲಿಂಗ್ 15ಕಿ.ಮಿ. ಸ್ಪರ್ಧೆಯಲ್ಲಿ 5ನೇ ಸ್ಥಾನ
- 2019ರ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂಟಿಬಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ 9ನೇ ಸ್ಥಾನ
- 2021ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಎಂಟಿಬಿ ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿ 3ನೇ ಸ್ಥಾನ
- 2021ರಲ್ಲಿ ಗದಗದಲ್ಲಿ ನಡೆದ ರಾಷ್ಟ್ರೀಯ ಎಂಟಿಬಿ ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿ 3ನೇ ಸ್ಥಾನ
- ಈಗ ನ್ಯಾಷನಲ್ ಲೆವೆಲ್ ಗೇಮ್ಸ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ
ಪಂಜಾಬ್‍ನ ಪಟಿಯಾಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದು, ಈ ಕ್ಯಾಂಪಿನಲ್ಲಿ ಪಾಲ್ಗೊಳ್ಳಲು ಅಂತಾರಾಷ್ಟ್ರೀಯ ಗುಣಮಟ್ಟದ ಸೈಕಲ್ ಅವಶ್ಯಕತೆ ಇತ್ತು, ಅದನ್ನು ಈಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡಲಾಗಿದೆ.