ಬೆಂಗಳೂರು: "ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ. ರಾಜ್ಯದ ಎಲ್ಲಾ ನಿರೀಕ್ಷೆಗಳಿಗೂ ಸ್ಪಂದನೆ ದೊರೆತಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಇಲಾಖೆಗೆ ಅನುದಾನ ಬರಲಿದೆ" ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
"ಭಾರತದ ಆರ್ಥಿಕ ಸ್ಥಿತಿ ವಿಶ್ವದ ಇತರ ಪ್ರಗತಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಮುಂದುವರೆಯುತ್ತಿದೆ. ಬಹಳ ದೇಶಗಳಲ್ಲಿ ಆರ್ಥಿಕ ಸಂಕಷ್ಟವಿದೆ. ನಮ್ಮ ದೇಶದ ಆರ್ಥಿಕತೆ ಗಟ್ಟಿ ಅಡಿಪಾಯದ ಮೇಲಿದೆ. ಪ್ರಧಾನಿಯವರು ಮೂಲಭೂತ ಸುಧಾರಣೆ ತಂದಿದ್ದಾರೆ. ಹಾಗಾಗಿ, ನಮ್ಮ ಜಿಡಿಪಿ ಆರೋಗ್ಯಪೂರ್ಣವಾಗಿದೆ. ಬಜೆಟ್ನ ಪ್ರಮುಖ ಅಂಶ, ದೇಶದ ಆರ್ಥಿಕ ವೃದ್ಧಿಗೆ ಇನ್ನಷ್ಟು ಬಲ ನೀಡುತ್ತದೆ" ಎಂದು ವಿವರಿಸಿದರು.
ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು: "ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಮಹತ್ವ ಕೊಡಲಾಗಿದೆ. ಗ್ರಾಮಗಳಲ್ಲಿ ಮನೆ ಕಟ್ಟಲು ಅನುದಾನ ಹೆಚ್ಚಿಸಲಾಗಿದೆ. ಕುಡಿಯುವ ನೀರು ಕೊಡುವ ಗುರಿಗೆ ಪೂರಕವಾಗಿ ಅನುದಾನ ಹೆಚ್ಚಿಗೆ ಮಾಡಿದ್ದಾರೆ. ಸಣ್ಣ ಕೈಗಾರಿಕೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಮಹಿಳೆಯರ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪೂರಕ ಬಜೆಟ್ ಇದು. ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಿದ್ದಾರೆ. ಯುವಕರ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೃಷಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಹಾಯವಾಗಲಿದೆ" ಎಂದರು.
"ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂ. ನೀಡಲಾಗಿದೆ. ನಿಜಲಿಂಗಪ್ಪ ಕಾಲದಲ್ಲಿ ಭದ್ರಾ ಮೇಲ್ದಂಡೆ ಆಗಬೇಕು ಎಂಬುದಿತ್ತು. ಆಗಿನಿಂದ 40 ವರ್ಷ ಕಳೆದರೂ ಯಾವ ಸರ್ಕಾರವೂ ಏನೂ ಮಾಡಿಲ್ಲ. ನಾವು ಬಂದ ಮೇಲೆ ಯೋಜನೆ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ರಾಷ್ಟ್ರೀಯ ಮಾನ್ಯತೆ ಸಂಬಂಧ ಕೇಂದ್ರದ ಇಲಾಖೆಗಳಿಂದ ಎಲ್ಲವೂ ಒಪ್ಪಿಗೆ ಸಿಕ್ಕಿದೆ. ಈಗ 5,300 ಕೋಟಿ ಘೋಷಿಸಿರುವುದು ರಾಷ್ಟ್ರೀಯ ಮಾನ್ಯತೆ ಸಿಕ್ಕಿದ ಹಾಗೆ" ಎಂದರು.