ಬೆಂಗಳೂರು:ಕೊರೊನಾ ದಾಳಿಯಿಂದಾಗಿ ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಜ್ಜಾಗಿದ್ದು, ಸಂಭ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಂ.ಜಿ.ರೋಡ್, ಬಿಗ್ರೇಡ್, ಕೋರಮಂಗಲ, ಇಂದಿರಾನಗರ ಸೇರಿದಂತೆ ನಗರದಲ್ಲಿ 8500ಕ್ಕೂ ಹೆಚ್ಚಿನ ಪೊಲೀಸರು ಭದ್ರತೆ ನಿಯೋಜಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಕೈಗೊಂಡಿರುವ ಪೊಲೀಸ್ ಭದ್ರತಾ ಕ್ರಮಗಳ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಆಯುಕ್ತರು, 5200 ಪೊಲೀಸ್ ಕಾನ್ ಸ್ಟೇಬಲ್, ಹೆಡ್ಕಾನ್ಸ್ಟೇಬಲ್ 1800, ಎಎಸ್ಐ 800, ಪಿಎಸ್ಐ, 600, ಇನ್ಸ್ಪೆಕ್ಟರ್160 ಸೇರಿದಂತೆ ಹಿರಿಯ ಅಧಿಕಾರಿಗಳು ಒಳಗೊಂಡಂತೆ 8 ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.
ಜನರು ಹೆಚ್ಚಾಗಿ ಸೇರುವ ಎಂ.ಜಿ.ರೋಡ್, ಬಿಗ್ರೇಡ್ ರೋಡ್, ರೆಸಿಡೆನ್ಸಿ ರೋಡ್ನಲ್ಲಿ 4 ಮಂದಿ ಡಿಸಿಪಿ, 10 ಎಸಿಪಿ, 30 ಇನ್ ಸ್ಪೆಕ್ಟರ್ ಒಳಗೊಂಡಂತೆ 3 ಸಾವಿರ ಪೊಲೀಸರನ್ನು ಭದ್ರತೆಗೆ ಇರಲಿದ್ದಾರೆ. ಹೊಸ ವರ್ಷಾಚರಣೆ ಸಂಭ್ರಮಿಸಲು ಬರುವ ಜನರನ್ನು ನಿಯಂತ್ರಿಸಲು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ಪಿಕೆಟಿಂಗ್ ಪಾಯಿಂಟ್, ವುಮೆನ್ ಸೇಫ್ಟಿ ಐಸ್ ಲ್ಯಾಂಡ್ ತೆರೆಯಲಾಗುವುದು. ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲಿಗಾಗಿ ವಾಚ್ ಟವರ್ ನಿರ್ಮಿಸಲಾಗುವುದು ಎಂದರು.