ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಂಟನೇ ತರಗತಿ ಓದುತ್ತಿರುವ ಮಕ್ಕಳಿಗೆ ಈ ಬಾರಿಯೂ ಸೈಕಲ್ ಹತ್ತುವ ಭಾಗ್ಯವಿಲ್ಲ. ಕಳೆದ ವರ್ಷ ಸೈಕಲ್ ಭಾಗ್ಯ ಯೋಜನೆಗೆ ಕಡಿವಾಣ ಹಾಕಿದ್ದ ಸರ್ಕಾರ, ಈ ಬಾರಿಯೂ ಸರ್ಕಾರಿ ಶಾಲೆಗಳಲ್ಲಿ ಎಂಟನೇ ತರಗತಿ ಓದುತ್ತಿರುವ ಮಕ್ಕಳಿಗೆ ಸೈಕಲ್ ನೀಡಲು ಉತ್ಸುಕತೆ ತೋರುತ್ತಿಲ್ಲ. ಮಕ್ಕಳಿಗೆ ಈ ಬಾರಿಯಲ್ಲದಿದ್ದರೆ ಮುಂದಿನ ಬಾರಿ ಸೈಕಲ್ ನೀಡಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಸ್ಪಷ್ಟ ಉತ್ತರ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಈಗ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಳ ಮಾಡಲು ಆದ್ಯತೆ ನೀಡಿದ್ದೇವೆ. ಸುಮಾರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಎಂಟು ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತಿದ್ದು, ಇದರಿಂದ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಕ್ಕಳ ಕಲಿಕೆಗೆ ಕೊರತೆಯಾಗಬಾರದು ಎಂಬ ಕಾರಣಕ್ಕಾಗಿ ಈ ವರ್ಷ 12 ಸಾವಿರ ಮಂದಿ ಶಿಕ್ಷಕರ ಹೈಸ್ಕೂಲ್ಗೆ ನೇಮಕಾತಿ ಮಾಡಿಕೊಳ್ಳುತ್ತೇವೆ.
ಅತಿಥಿ ಶಿಕ್ಷಕರ ನೇಮಕಕ್ಕೆ ತೀರ್ಮಾನ: ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ನೇಮಕ ಮಾಡಿಕೊಳ್ಳದಷ್ಟು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈ ವರ್ಷ 38 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದ ಸಚಿವರು, ನೇಮಕಗೊಂಡ ಶಿಕ್ಷಕರ ಪೈಕಿ ಪ್ರಾಥಮಿಕ ಶಾಲಾ ಶಿಕ್ಷಕರ ಗೌರವ ಧನದ ಪ್ರಮಾಣವನ್ನು ಎರಡೂವರೆ ಸಾವಿರ ರೂ.ಗಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಹೈಸ್ಕೂಲ್ ಶಿಕ್ಷಕರ ಗೌರವ ಧನದ ಪ್ರಮಾಣವನ್ನು 3 ಸಾವಿರ ರೂ. ಗಳಷ್ಟು ಹೆಚ್ಚಳ ಮಾಡಲಾಗುಗುವುದು ಎಂದರು.
ಹೀಗೆ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಳ ಮಾಡಲು ಏನು ಬೇಕೋ? ಅದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಸೈಕಲ್ ಭಾಗ್ಯ ಯೋಜನೆಯನ್ನು ಜಾರಿಗೆ ತರುವ ವಿಷಯದಲ್ಲಿ ಉತ್ಸಾಹ ವ್ಯಕ್ತಪಡಿಸಲಿಲ್ಲ. ಕಳೆದ ವರ್ಷವೂ ಸೈಕಲ್ ನೀಡಿಲ್ಲ. ಈ ವರ್ಷ ನೀಡದಿದ್ದರೆ ಮುಂದಿನ ವರ್ಷ ನೀಡಿದರಾಯಿತು ಎಂದು ವಿಷಯವನ್ನು ಬಿ ಸಿ ನಾಗೇಶ್ ನಯವಾಗಿ ತಳ್ಳಿ ಹಾಕಿದರು.