ಕರ್ನಾಟಕ

karnataka

By ETV Bharat Karnataka Team

Published : Oct 26, 2023, 10:04 AM IST

Updated : Oct 26, 2023, 4:46 PM IST

ETV Bharat / state

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ: ವಿಶೇಷ ತಂಡ ರಚನೆಗೆ ಸಿದ್ಧತೆ

ವನ್ಯಜೀವಿ ವಸ್ತುಗಳ ಸಂಗ್ರಹ ಮಾರಾಟ ಪ್ರಕರಣಗಳ ಕುರಿತು ತಂಡವನ್ನು ರಚಿಸುವುದರ ಬಗ್ಗೆ ಅರಣ್ಯ ಇಲಾಖೆ ಪ್ರಧಾನ ಸಂರಕ್ಷಣಾಧಿಕಾರಿ ಸಚಿವ ಈಶ್ವರ್​ ಖಂಡ್ರೆಗೆ ಪತ್ರ ಬರೆದಿದ್ದಾರೆ.

ಸಚಿವ ಈಶ್ವರ್​ ಖಂಡ್ರೆ
ಸಚಿವ ಈಶ್ವರ್​ ಖಂಡ್ರೆ

ಬೆಂಗಳೂರು: ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ವನ್ಯಜೀವಿ ವಸ್ತುಗಳ ಸಂಗ್ರಹ, ಮಾರಾಟ ಪ್ರಕರಣಗಳ ಕುರಿತು ತಂಡವನ್ನ ರಚಿಸುವುದರ ಬಗ್ಗೆ ಅರಣ್ಯ, ಜೀವಶಾಸ್ತ್ರ ಪರಿಸರ ಸಚಿವ ಈಶ್ವರ್ ಖಂಡ್ರೆಯವರಿಗೆ ಅರಣ್ಯ ಇಲಾಖೆಯ ಪ್ರಧಾನ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಪತ್ರ ಬರೆದಿದ್ದಾರೆ.

ವನ್ಯಜೀವಿ ವಸ್ತುಗಳ ಸಂಗ್ರಹ, ಮಾರಾಟದ ವಿರುದ್ಧ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸಲು ಅಗತ್ಯ ಇರುವುದರಿಂದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ತಂಡ ರಚಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತಂಡದಲ್ಲಿ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಬೆಂಗಳೂರು, ಹಾಸನ, ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಜೊತೆಗೆ ಬೆಂಗಳೂರು ನಗರ, ತುಮಕೂರು, ಕೊಪ್ಪ, ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇರಲಿದ್ದಾರೆ.

ಈ ತಂಡವು ವನ್ಯಜೀವಿ ವಸ್ತುಗಳ ಸಂಗ್ರಹ ಕಾಯ್ದೆ ಜಾರಿಯಾದಾಗಿನಿಂದ ದಾಖಲಾಗಿರುವ ಪ್ರಕರಣಗಳು, ಕೈಗೊಂಡ ಕ್ರಮಗಳ ಪಟ್ಟಿ ಸಿದ್ಧಪಡಿಸಲಿದೆ. ಹಾಗೂ ಹಾಲಿ ಇರುವ ಪ್ರಕರಣಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಶಿಫಾರಸು, ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನ ಮತ್ತಷ್ಟು ಬಿಗಿಗೊಳಿಸಲು ಅಗತ್ಯ ಕ್ರಮಗಳ ಬಗ್ಗೆ ಒಂದು ವಾರದೊಳಗೆ ವರದಿ ನೀಡಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರ ಅಡಿ ಹುಲಿ ಉಗುರು, ಹಲ್ಲು, ಚರ್ಮ ಸೇರಿದಂತೆ ಯಾವುದೇ ವನ್ಯಜೀವಿಯ ಅಂಗಾಂಗದಿಂದ ಮಾಡಿದ ವಸ್ತುಗಳ ಸಂಗ್ರಹ ಹಾಗೂ ಮಾರಾಟ ನಿಷೇಧಿಸಲಾಗಿದೆ. ಆದ್ದರಿಂದ ವಿಶೇಷ ತಂಡದ ಸದಸ್ಯರು ಈ ಕಾಯ್ದೆಯನ್ನ ಹೇಗೆ ಕಠಿಣವಾಗಿ ಜಾರಿ ತರಬೇಕು ಹಾಗೂ ಹಾಲಿ ಪ್ರಕರಣಗಳಲ್ಲಿ ಹೇಗೆ ಕಾನೂನು ಕ್ರಮವನ್ನು ಜರುಗಿಸಬೇಕ, ಮುಂದಿನ ದಿನಗಳಲ್ಲಿ ಈ ಕಾಯ್ದೆಯಡಿ ಹೇಗೆ ಇಲಾಖೆ ಕೆಲಸ ಮಾಡಬೇಕು ಎಂಬ ರೂಪುರೇಷೆ ಸಿದ್ಧಪಡಿಸಲಿದೆ.

ಸಮಿತಿ ರಚನೆಗೆ ನಿರ್ದೇಶನ: ಹುಲಿ ಹಲ್ಲು, ಹುಲಿ ಉಗುರು ಸೇರಿ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಮಾಡಿದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಜನಜಾಗೃತಿ ಮೂಡಿಸಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ಅರಣ್ಯ ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ನಿನ್ನೆ ದಿನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ವನ್ಯಜೀವಿ ಉತ್ಪನ್ನ ಮಾರಾಟಕ್ಕೆ ತಡೆ: ಉನ್ನತ ಮಟ್ಟದ ಸಮಿತಿ ರಚನೆ

Last Updated : Oct 26, 2023, 4:46 PM IST

ABOUT THE AUTHOR

...view details