ಬೆಂಗಳೂರು: ಮಹಾಮಾರಿ ಕೊರೊನಾದಿಂದ ಇಡೀ ಜಗತ್ತೇ ತಲ್ಲಣಗೊಂಡಿದ್ದು, ಇಂತಹ ಸಂದರ್ಭದಲ್ಲಿ ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತನಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿಟ್ಟ ಕ್ರಮಗಳನ್ನು ಕೈಗೊಂಡಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ರೈತರು ಬೆಳೆದಂತಹ ಬೆಳೆಗಳನ್ನು ಕೊಯ್ಲು ಮಾಡಲು, ಮಾರಾಟ ಮಾಡಲು ಯಾವುದೇ ನಿಬಂಧನೆಗಳು ಇರುವುದಿಲ್ಲ. ಮಾನ್ಸೂನ್ ಪ್ರಾರಂಭವಾದಲ್ಲಿ ರೈತ ಹೊಲದಲ್ಲಿ ಬಿತ್ತನೆ ಮಾಡಲು ಸರ್ಕಾರ ರೈತನಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಒದಗಿಸಲು ಕ್ರಮಗಳನ್ನು ಕೈಗೊಂಡಿದೆ. ಬೆಳೆಗಳನ್ನು ಸಾಗಾಣಿಕೆ ಮಾಡಲು ಎಸೆನ್ಷಿಯಲ್ ಕಮಾಡಿಟೀಸ್ ಆ್ಯಕ್ಟ್ (ಅಗತ್ಯ ವಸ್ತುಗಳ ಕಾಯ್ದೆ) ಅಡಿ ತಂದಿದ್ದು, ಈ ಸಂಬಂಧ ರಾಜ್ಯದ ಎಲ್ಲಾ ಕೃಷಿ ನಿರ್ದೇಶಕರು ಹಾಗೂ ಜಂಟಿ ಕೃಷಿ ನಿರ್ದೇಶಕರುಗಳಿಗೆ ಹಾಗೂ ಎಲ್ಲಾ ಇಲಾಖೆಗಳಿಗೂ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಇತರೆ ಭಾಗಗಳಲ್ಲಿ ಭತ್ತ ಬೆಳೆದ ರೈತರು ಕೊಯ್ಲಿಗೆ ಪರ ರಾಜ್ಯದಿಂದ ಯಂತ್ರ ತರಬೇಕಾಗುತ್ತದೆ ಎಂಬ ಆತಂಕದಲ್ಲಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು, ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವುದು ಬೇಡ. ಬಿತ್ತನೆ ಮಾಡಲಾಗಲಿ ಅಥವಾ ಕೊಯ್ಲು ಮಾಡಲಾಗಲಿ ರೈತರಿಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ರೈತರ ಕೃಷಿ ಚಟುವಟಿಕೆಗಳಿಗೆ ಯಾರೂ ಸಹ ತೊಂದರೆ ಮಾಡಬಾರದು. ಯಂತ್ರೋಪಕರಣ ತಂದು ಕೊಯ್ಲು ಕೃಷಿ ಚಟುವಟಿಕೆ ಮಾಡುವ ಮುನ್ನ ರೈತರು ಅಧಿಕಾರಿಗಳಿಗೆ ಮಾಹಿತಿ ಕೊಡಬೇಕು. ಕೃಷಿ ಚಟುವಟಿಕೆ ಮಾಡುವಾಗ ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಿತ್ತನೆ ಬೀಜ ಮತ್ತು ಫಸಲು ಸರಬರಾಜು ಮಾಡುವಾಗ ಇಲಾಖಾಧಿಕಾರಿಗಳಿಂದ ಸರಬರಾಜು ಮಾಡುವ ವಾಹನಗಳಿಗೆ ಕೃಷಿಕರು ಪಾಸ್ ಪಡೆಯಬೇಕು ಎಂದು ಸಚಿವರು ಸೂಚಿಸಿದ್ದಾರೆ.