ಬೆಂಗಳೂರು: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇದುವರೆಗೂ ರಾಜ್ಯ, ಕೇಂದ್ರ ಸರ್ಕಾರಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ. ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆಯಾದ ಸಂದರ್ಭ ಮಾ. 23ರಂದು ದೇಶದಲ್ಲಿ 564 ಮಂದಿ ಕೊರೊನಾ ಪಾಸಿಟಿವ್ ರೋಗಿಗಳು ಇದ್ದರು. ಮಾ. 9ಕ್ಕೆ ನಮ್ಮ ರಾಜ್ಯದಲ್ಲಿ ಕೇವಲ ಒಂದು ಪ್ರಕರಣ ಇತ್ತು. ಆದರೆ ಇಂದು 4 ಲಕ್ಷ ಸಂಖ್ಯೆ ಮೀರಿದೆ.
ದೇಶಕ್ಕೆ ಅವಶ್ಯಕತೆ ಇಲ್ಲದ ಸಂದರ್ಭ ಭಾಷಣ ಮಾಡಿದ್ದರು. ಯಾವಾಗ ಅಗತ್ಯ ಇತ್ತು ಆ ಸಂದರ್ಭ ಲಾಕ್ಡೌನ್ ತೆರವು ತೆರವು ಮಾಡಿದ್ದಾರೆ. ಈ ಸಂದರ್ಭ ಏನು ಮಾಡಬೇಕೆಂಬ ಅರಿವು ಇಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆದುಕೊಳ್ಳುತ್ತಿವೆ. ಯಾವುದೇ ತೀರ್ಮಾನ ಕೈಗೊಳ್ಳುವ ಸಂದರ್ಭ ತಜ್ಞರು, ಇಲ್ಲವೇ ಪ್ರತಿಪಕ್ಷಗಳು, ಇಲ್ಲವೇ ರಾಷ್ಟ್ರಮಟ್ಟದ ಮಂತ್ರಿಗಳು ಅಥವಾ ಬೇರೆ ಮುಖಂಡರೊಂದಿಗೆ ಚರ್ಚೆ ನಡೆಸದೆ ಮನಸೋಇಚ್ಛೆ ತೀರ್ಮಾನ ಕೈಗೊಂಡಿದ್ದಾರೆ. ಈ ಸಮಸ್ಯೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಹೊಣೆ ಎಂದು ದೂರಿದರು.
ಮೂರ್ನಾಲ್ಕು ತಿಂಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಅಚ್ಚರಿಯಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಮ್ಮ ಬಳಿ ತಮ್ಮ ಬೇಸರ ತೋಡಿಕೊಂಡಿದ್ದಾರೆ. ಇದನ್ನು ನಾವು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಮಂತ್ರಿಗಳ ಗಮನಕ್ಕೂ ತರುವ ಕಾರ್ಯ ಮಾಡಿದ್ದೇವೆ. ಒಂದು ವಾರ ಕಾರ್ಯನಿರ್ವಹಿಸಿದ ವೈದ್ಯರು ಹಾಗೂ ಸಿಬ್ಬಂದಿ ಮನೆಗೆ ತೆರಳುವಂತಿಲ್ಲ. ಇವರಿಗೆ ಅಲ್ಲಿ ಸೂಕ್ತ ಸೌಲಭ್ಯ ಕೂಡ ಸಿಗುತ್ತಿಲ್ಲ. ಆದ್ದರಿಂದ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಕಾವೇರಿ ಅತಿಥಿ ಗೃಹ ಇಲ್ಲವೇ ಬೇರೆ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯಕ್ಕೆ ಅಗತ್ಯ ಸೌಕರ್ಯ ಮಾಡಿಕೊಡಬೇಕು ಎಂದರು.