ಕರ್ನಾಟಕ

karnataka

ETV Bharat / state

ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿ ತಲುಪಿದ 20 ಟ್ರಕ್; 'ನಮ್ಮ ಕಾರ್ಗೋ ಸೇವೆ'ಗೆ ಡಿ.23ರಂದು ಚಾಲನೆ

ಬೆಂಗಳೂರಿನ ಶಾಂತಿನಗರದ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಮಹಾರಾಷ್ಟ್ರದ ಪುಣೆಯಿಂದ ಬಂದಿರುವ 20 ಹೊಸ ಟ್ರಕ್‌ಗಳನ್ನು ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿದರು.

By ETV Bharat Karnataka Team

Published : Dec 17, 2023, 9:51 PM IST

KSRTC Cargo Truck
ಕೆಎಸ್ಆರ್ಟಿಸಿಗೆ ಬಂದು ತಲುಪಿದ ಕಾರ್ಗೋ ಟ್ರಕ್​

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) 'ನಮ್ಮ ಕಾರ್ಗೋ ಸೇವೆ' ಒದಗಿಸಲು ಟಾಟಾ ಕಂಪನಿಯ ಹೊಸ ಟ್ರಕ್​​ಗಳು ಕೆಎಸ್​ಆರ್​ಟಿಸಿ ನಿಗಮ ಬಂದು ತಲುಪಿವೆ. ಡಿಸೆಂಬರ್ 23ರಂದು ರಾಜ್ಯದಲ್ಲಿ ಕಾರ್ಗೋ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಲಿದ್ದಾರೆ.

ಡಿಸೆಂಬರ್ 15ರಂದು ಯೋಜನೆಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ನಾನಾ ಕಾರಣಗಳಿಂದ ಮುಂದೂಡಲಾಗಿದೆ. ಇದೀಗ ಸೇವೆ ಆರಂಭಕ್ಕೆ ಮುಹೂರ್ತ ನಿಗದಿಪಡಿಸಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಪುಣೆಯ ಟಾಟಾ ಘಟಕದಲ್ಲಿ 6 ಟನ್ ಸಾಮರ್ಥ್ಯದ ಟ್ರಕ್‌ಗಳನ್ನು ಕೆಎಸ್ಆರ್‌ಟಿಸಿ ಬೇಡಿಕೆಯಂತೆ ವಿನ್ಯಾಸ ಮಾಡಲಾಗಿದೆ. 20 ಟ್ರಕ್‌ಗಳನ್ನು ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಪುಣೆಯಿಂದ ಬಂದ ಟ್ರಕ್‌ಗಳನ್ನು ಶಾಂತಿನಗರದ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿದರು.

ಡಿಸೆಂಬರ್ 23ರಂದು 'ನಮ್ಮ ಕಾರ್ಗೋ ಪಾರ್ಸೆಲ್' ಮತ್ತು ಕೊರಿಯರ್ ಟ್ರಕ್​​ಗಳಿಗೆ ಕೆಎಸ್ಆರ್‌ಟಿಸಿ ಕೇಂದ್ರ ಘಟಕ-4ರಲ್ಲಿ ಸಚಿವ ರಾಮಲಿಂಗಾರೆಡ್ಡಿ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯ ನೆರವೇರಿಸಿ ನೂತನ ಟ್ರಕ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

ಉಪ ಸಮಿತಿ ಸಭೆ: ಅಸೋಸಿಯೇಷನ್ ​​ಆಫ್ ಸ್ಟೇಟ್ ರೋಡ್ ಟ್ರಾನ್ಸ್‌ಪೋರ್ಟ್ ಅಂಡರ್‌ಟೇಕಿಂಗ್ (ASRTU) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಆಶ್ರಯದಲ್ಲಿ ಸ್ಥಾಯಿ ಸಮಿತಿ (ತಾಂತ್ರಿಕ ಮತ್ತು ಉಗ್ರಾಣ) ಮತ್ತು 209ನೇ ಬೆಲೆ ಪರಿಷ್ಕರಣೆ ಉಪ ಸಮಿತಿ ಸಭೆ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಡೆಯಿತು. ವಿವಿಧ ರಾಜ್ಯದ ಸಾರಿಗೆ ನಿಗಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗುಜರಾತ್ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮುಕುಲ್ ಗಾಂಧಿ, ಎಎಸ್‌ಆರ್‌ಟಿಸಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸೂರ್ಯಕಿರಣ್, ಎಎಸ್‌ಆರ್‌ಟಿಯು ನಿರ್ದೇಶಕ ಆರ್.ಕೆ.ಕಿಶೋರ್, ಕೆಎಸ್ಆರ್‌ಟಿಸಿ ನಿರ್ದೇಶಕಿ ಡಾ.ಕೆ.ನಂದಿನಿ ದೇವಿ ಹಾಗೂ ಆಂಧ್ರಪ್ರದೇಶ ಎಸ್‌ಆರ್‌ಟಿಸಿ, ಗುಜರಾತ್‌ ಎಸ್‌ಆರ್‌ಟಿಸಿ, ಮಹಾರಾಷ್ಟ್ರ ಎಸ್‌ಆರ್‌ಟಿಸಿ, ತೆಲಂಗಾಣ ಎಸ್‌ಆರ್‌ಟಿಸಿ, ತಮಿಳುನಾಡು ಎನ್‌ಎಸ್‌ಟಿಸಿ, ಕೆಕೆಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ವಿವಿಧ ನಿಗಮ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಸ್ಥಾಯಿ ಸಮಿತಿಯ (ಟೆಕ್ಣಿಕಲ್ ಮತ್ತು ಸ್ಟೋರ್ಸ್) ಸಭೆಯಲ್ಲಿ ತೈಲ ವಿತರಣಾ ಘಟಕಗಳ ಸುಧಾರಣೆಗೆ ಸಂಬಂಧಿಸಿದಂತೆ ವಾಹನ ಎಂಜಿನಿಯರಿಂಗ್‌ನಲ್ಲಿ ವಿವಿಧ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಗಳು, ಬಸ್‌ಗಳ ಮೇಲ್ಛಾವಣಿ ಸೋರಿಕೆ ತಪ್ಪಿಸಲು, ರಸ್ತೆ ಸುರಕ್ಷತೆ ಮತ್ತು ನಿರ್ವಹಣೆ ಅಭ್ಯಾಸಕ್ಕಾಗಿ ಸಹಾಯಕ ದೀಪಗಳು, ಇತರೆ ತಂತ್ರಜ್ಞಾನಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

ಇದೇ ವೇಳೆ ಉಗ್ರಾಣ ಬಿಡಿ ಭಾಗಗಳ ಮಾರಾಟಗಾರರ ಡೈರೆಕ್ಟರಿ ಬಿಡುಗಡೆ ಮಾಡಲಾಯಿತು. ಇದರಿಂದ ಬಿಡಿಭಾಗಗಳ ಖರೀದಿಯಲ್ಲಿ ಎಲ್ಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಪ್ರಯೋಜನವಾಗಲಿದೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ. ಬೆಂಗಳೂರಿಗೆ ಆಗಮಿಸಿದ್ದ ವಿವಿಧ ರಾಜ್ಯಗಳ ಸಾರಿಗೆ ನಿಗಮಗಳ ಪ್ರತಿನಿಧಿಗಳು ನಮ್ಮ ಕಾರ್ಗೋ ಸೇವೆ ಟ್ರಕ್‌ಗಳನ್ನು ವೀಕ್ಷಿಸಿದರು. ಸಭೆಯ ನಂತರ ಪ್ರತಿನಿಧಿಗಳು ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರ ವಿಭಾಗದ ಡಿಪೋಗಳು, ಕೆಬಿಎಸ್‌ಬಿಐಎಸ್ ನಿಲ್ದಾಣಕ್ಕೆ ಭೇಟಿ ನೀಡಿದರು. ನಮ್ಮ ಕಾರ್ಗೋ ಟ್ರಕ್‌ಗಳನ್ನು ಸಹ ವೀಕ್ಷಿಸಿದರು.

ಇದನ್ನೂಓದಿ:ನಿಗಮ, ಮಂಡಳಿ ನೇಮಕಾತಿ ವಿಚಾರವಾಗಿ ದೆಹಲಿ ನಾಯಕರ ಭೇಟಿ: ಡಿ.ಕೆ.ಶಿವಕುಮಾರ್

ABOUT THE AUTHOR

...view details