ಬೆಂಗಳೂರು:ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಲು ಒಪ್ಪಿಗೆ ಹಾಗೂ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಬಳಿಕ ನಡೆದ ಘಟನೆಯಲ್ಲಿ ಶಿರಸಿಯಲ್ಲಿ ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣ ವಾಪಸ್, ಜಲಜೀವನ ಮಿಷನ್ ಯೋಜನೆಯಡಿ 1051.07 ಕೋಟಿ ರೂ. ಅಂದಾಜು ಮೊತ್ತದ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ವಿಧಾನಸೌಧದಲ್ಲಿ ನಿನ್ನೆ(ಸೋಮವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ 48 ಗ್ರಾಮಗಳು ಮತ್ತು ಬೇಲೂರು ತಾಲೂಕಿನ 12 ಗ್ರಾಮಗಳಿಗೆ ಸಂಬಂಧಿಸಿದಂತೆ 38.96 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಪುನಶ್ಚೇತನ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿಯ ಬಲಭಾಗದಲ್ಲಿರುವ 28 ಜನವಸತಿಗಳಿಗೆ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ 240 ಜನವಸತಿಗಳಿಗೆ, ಮದ್ದೂರು ತಾಲೂಕಿನ 156 ಜನವಸತಿಗಳಿಗೆ, ಮಳವಳ್ಳಿ ತಾಲೂಕಿನ 151 ಜನವಸತಿಗಳಿಗೆ ಸೇರಿದಂತೆ ಒಟ್ಟು 885.19 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಳಚಾವುರ ಮತ್ತು ಇತರೆ 54 ಜನವಸತಿಗಳಿಗೆ 91.22 ಕೋಟಿ ರೂ. ಅಂದಾಜು ಮೊತ್ತದ ಪುನಶೇತ್ಚನ ಕಾಮಗಾರಿ ಮತ್ತು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಮತ್ತು ಇತರೆ 15 ಗ್ರಾಮಗಳಿಗೆ 36.50 ಕೋಟಿ ರೂ. ಮೊತ್ತದ ಪುನಶ್ಚೇತನ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.
ಸಿಎಂಗೆ ಅಭಿನಂದನೆ:ಮಂಡ್ಯ ಜಿಲ್ಲೆಯ ಐದು ಪ್ರತ್ಯೇಕ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವುದಕ್ಕೆ ಕ್ರೀಡಾ ಸಚಿವ ನಾರಾಯಣಗೌಡ ಅಭಿನಂದಿಸಿದ್ದಾರೆ. ಪ್ರತಿಯೊಬ್ಬರಿಗೂ ಶುದ್ಧ ಕುಡಿಯವ ನೀರು ನೀಡಬೇಕು ಎಂಬುದು ನಮ್ಮ ಸರ್ಕಾರದ ಕನಸು. ಅದೇ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೂ ಶುದ್ಧೀಕರಣ ನೀರು ಪೂರೈಕೆ ಮಾಡುವ ಯೋಜನೆ ಜಾರಿಗೆ ತರಲಾಗಿದೆ.
ಜೆಜೆಎಂ ಯೋಜನೆಯಲ್ಲಿ ಮಂಡ್ಯ ಜಿಲ್ಲೆಗೆ ಸುಮಾರು 2 ಸಾವಿರ ಕೋಟಿ ರೂ.ನಷ್ಟು ಅನುದಾನ ನೀಡಲಾಗಿದೆ. ಮೊದಲ ಹಂತದಲ್ಲಿ ಕೆಆರ್ ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕುಗಳಲ್ಲಿ 791 ಕೋಟಿ ರೂ. ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ಸುಮಾರು 885 ಕೋಟಿ ರೂ. ಮೊತ್ತದ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಿ, ಆದಷ್ಟು ಬೇಗ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದಿದ್ದಾರೆ.
ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣ ವಾಪಸ್:ಪರೇಶ್ ಮೇಸ್ತಾ ಸಾವಿನ ಪ್ರಕರಣದ ಬಳಿಕ ನಡೆದ ಘಟನೆಯಲ್ಲಿ ಶಿರಸಿಯಲ್ಲಿ ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲು ಸಂಪುಟ ತೀರ್ಮಾನಿಸಿದೆ. ಈ ಹಿಂದೆ 26 ಪ್ರಕರಣಗಳನ್ನು ವಾಪಸ್ ಪಡೆಯಲಾಗಿತ್ತು. ಈಗ 112 ಜನರ ಮೇಲೆ ಉಳಿದು ಹೋಗಿದ್ದ 3 ಪ್ರಕರಣ ವಾಪಸ್ ಪಡೆಯಲಾಗಿದೆ. ವಾಪಸ್ ಪಡೆದದುಕ್ಕಾಗಿ ಸರ್ಕಾರವನ್ನು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದಿಸಿದ್ದಾರೆ.