ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ - ಶಿವಕುಮಾರ್ ಸಂಪುಟದ ನೂತನ ಸಚಿವರ ಸಂಕ್ಷಿಪ್ತ ವಿವರ - ನೂತನ ಸಚಿವರ ಸಂಕ್ಷಿಪ್ತ ವಿವರ

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರೊಂದಿಗೆ ಡಾ. ಜಿ. ಪರಮೇಶ್ವರ್, ಹೆಚ್​ಕೆ ಮುನಿಯಪ್ಪ, ಎಂಬಿ ಪಾಟೀಲ್​ ಸೇರಿ ಒಟ್ಟು ಹತ್ತು ಜನರು ಇಂದು ಪದಗ್ರಹಣ ಮಾಡಿದ್ದಾರೆ.

brief-profile-of-karnataka-new-cm-and-ministers
ಸಿದ್ದರಾಮಯ್ಯ - ಶಿವಕುಮಾರ್ ಸಂಪುಟದ ನೂತನ ಸಚಿವರ ಸಂಕ್ಷಿಪ್ತ ವಿವರ

By

Published : May 20, 2023, 2:37 PM IST

Updated : May 20, 2023, 3:38 PM IST

ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪದಗ್ರಹಣ ಮಾಡಿದ್ದಾರೆ. ಇವರೊಂದಿಗೆ ಹಿರಿಯ ಶಾಸಕರು ಸೇರಿ ಎಂಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಂಪುಟದ ಸದಸ್ಯರ ಸಂಕ್ಷಿಪ್ತ ವಿವರ ಇಲ್ಲಿದೆ.

ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ:ಹಿರಿಯ ನಾಯಕರಾದ ಸಿದ್ದರಾಮಯ್ಯ ರಾಜ್ಯದ 31ನೇ ಮುಖ್ಯಮಂತ್ರಿಯಾಗಿದ್ದು, ಎರಡನೇ ಬಾರಿಗೆ ಹುದ್ದೆಗೆ ಏರಿದ್ದಾರೆ. 1983ರಲ್ಲಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದ ಅವರು, ಹತ್ತು ಚುನಾವಣೆಗಳನ್ನು ಎದುರಿಸಿದ್ದಾರೆ. ಮೂರು ಬಾರಿ ವಿಧಾನಸಭೆ ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದಾರೆ. 1991ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಸೋಲು ಅನುಭವಿಸಿದ್ದರು. ಉಪ ಚುನಾವಣೆ ಸೇರಿ ಎಂಟು ಆಯ್ಕೆಯಾಗಿದ್ದಾರೆ. ಎರಡು ಬಾರಿ ಡಿಸಿಎಂ ಆಗಿ ಸಲ್ಲಿಸಿರುವ ಸಿದ್ದರಾಮಯ್ಯ ಹಣಕಾಸು ಸಚಿವರಾಗಿ 13 ಬಜೆಟ್​ಗಳನ್ನು ಮಂಡಿಸಿದ್ದಾರೆ. ಎರಡು ಬಾರಿಸಿ ಪ್ರತಿಪಕ್ಷದ ನಾಯಕರೂ ಆಗಿದ್ದ ಅವರು 2013ರಿಂದ 2018ರವರೆಗೆ ಪೂರ್ಣಾವಧಿಯ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.

ಡಿಕೆ ಶಿವಕುಮಾರ್

ಡಿಸಿಎಂ ಡಿಕೆ ಶಿವಕುಮಾರ್: 8ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಹುದ್ದೆಗೆ ಏರಿದ್ದಾರೆ. 1985 ರಲ್ಲಿ ಒಮ್ಮೆ ಸೋಲು ಅನುಭವಿಸಿದ್ದ ಡಿಕೆಶಿ 1989ರಲ್ಲಿ ಮೊದಲ ಸಲ ಶಾಸಕರಾಗಿದ್ದ ಡಿಕೆಶಿ ಇದುವರೆಗೆ 8 ಬಾರಿ ಗೆಲುವು ಸಾಧಿಸಿದ್ದಾರೆ. ಹಲವು ಖಾತೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. 1991ರಲ್ಲಿ ಎಸ್. ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆಯನ್ನು ಡಿಕೆಶಿ ಅವರಿಗೆ ನೀಡಲಾಗಿತ್ತು. ನಂತರದಲ್ಲಿ ವಿವಿಧ ಸರ್ಕಾರಗಳಲ್ಲಿ ಸಹಕಾರ, ನಗರಾಭಿವೃದ್ಧಿ, ಇಂಧನ, ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ.

ಡಾ. ಜಿ. ಪರಮೇಶ್ವರ್

ಡಾ. ಜಿ. ಪರಮೇಶ್ವರ್: ಹಿರಿಯ ರಾಜಕಾರಣಿಯಾದ ಜಿ. ಪರಮೇಶ್ವರ್ ಸಹ ಐದು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಗೃಹ ಸಚಿವ ಮತ್ತು ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಅನುಭವವನ್ನು ಹೊಂದಿದ್ದಾರೆ. 1993ರಲ್ಲಿ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಮೊದಲ ಸಹ ರೇಷ್ಮೆ ಖಾತೆ ಸಚಿವರಾಗಿದ್ದರು. 2002ರಲ್ಲಿ ಎಸ್​ಎಂ ಕೃಷ್ಣ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವರಾಗಿದ್ದರು. 2015ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿದ್ದರು. 2018ರಲ್ಲಿ ಹೆಚ್​ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯೊಂದಿಗೆ ಗೃಹ ಖಾತೆ, ಬೆಂಗಳೂರು ಅಭಿವೃದ್ಧಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಪರಮೇಶ್ವರ್​ ವಹಿಸಿಕೊಂಡಿದ್ದರು.

ಎಂಬಿ ಪಾಟೀಲ್

ಎಂಬಿ ಪಾಟೀಲ್​: ಹಿರಿಯ ನಾಯಕರಾದ ಎಂಬಿ ಪಾಟೀಲ್ ಇದುವರೆಗೆ ಆರು ಬಾರಿ ಶಾಸಕರಾಗಿ ಮತ್ತು ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ. 1991ರಲ್ಲಿ ತಿಕೋಟಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾಗಿದ್ದರು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ 5 ವರ್ಷಗಳ ಕಾಲ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2018ರಲ್ಲಿ ಹೆಚ್​ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಇದೆ.

ಹೆಚ್​ಕೆ ಮುನಿಯಪ್ಪ

ಹೆಚ್​ಕೆ ಮುನಿಯಪ್ಪ:ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಹೆಚ್​ಕೆ ಮುನಿಯಪ್ಪ ಒಬ್ಬರಾಗಿದ್ದು, 1991ರಿಂದ 2019ರವರಗೆ ಕೋಲಾರ ಕ್ಷೇತ್ರದಿಂದ ಸತತ ಏಳು ಬಾರಿ ಆಯ್ಕೆಯಾಗಿ ಲೋಕಸಭೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಜೊತೆಗೆ ಕೇಂದ್ರದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ರಾಜ್ಯ ದರ್ಜೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

ಸತೀಶ್ ಜಾರಕಿಹೊಳಿ

ಸತೀಶ್​ ಜಾರಕಿಹೊಳಿ: ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸತೀಶ್​ ಜಾರಕಿಹೊಳಿ ಎರಡು ಬಾರಿ ವಿಧಾನ ಪರಿಷತ್​ ಸದಸ್ಯರೂ ಆಗಿದ್ದರು. 2004-05ರಲ್ಲಿ ಧರಂಸಿಂಗ್ ನೇತೃತ್ವದ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜವಳಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವರಾಗಿದ್ದರು. 2018ರಲ್ಲಿ ಹೆಚ್​ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕೆಜೆ ಜಾರ್ಜ್​

ಕೆಜೆ ಜಾರ್ಜ್​​: 1985ರಿಂದ ಕೆಜೆ ಜಾರ್ಜ್ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವೀರೇಂದ್ರ ಪಾಟೀಲ್, ಎಸ್​. ಬಂಗಾರಪ್ಪ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. 2018ರಲ್ಲಿ ಹೆಚ್​ಡಿ ಕುಮಾರಸ್ವಾಮಿ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಖಾತೆಯ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ.

ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿ: ಕಾಂಗ್ರೆಸ್​ನ ಪ್ರಭಾವಿ ನಾಯಕರಲ್ಲಿ ಒಬ್ಬರಾದ ರಾಮಲಿಂಗಾರೆಡ್ಡಿ ಇಲ್ಲಿಯವರೆಗೆ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಗೃಹ ಸೇರಿ ಹಲವು ಖಾತೆಗಳನ್ನು ನಿರ್ವಹಿಸಿ ಅನುಭವವನ್ನು ಹೊಂದಿದ್ದಾರೆ. 2002ರಲ್ಲಿ ಮೊದಲ ಬಾರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. ನಂತರದಲ್ಲಿ 2004ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ, 2017-18ರಲ್ಲಿ ಗೃಹ ಖಾತೆ, ಸಾರಿಗೆ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಜಮೀರ್​ ಅಹ್ಮದ್

ಜಮೀರ್​ ಅಹ್ಮದ್​: ಜಮೀರ್ ಅಹ್ಮದ್ ಖಾನ್​ ನಾಲ್ಕನೇ ಬಾರಿ ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ. 2008, 2013ರಲ್ಲಿ ಜೆಡಿಎಸ್‌ ಪಕ್ಷದಿಂದ ಮತ್ತು 2018, 2023ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದಾರೆ. 2005ರಲ್ಲಿ ಹೆಚ್​ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್​ - ಬಿಜೆಪಿ ಸರ್ಕಾರದಲ್ಲಿ ಹಜ್​ ಮತ್ತು ವಕ್ಫ್ ಖಾತೆ ಸಚಿವರಾಗಿದ್ದರು.

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾದ ಪ್ರಿಯಾಂಕ್​ ಖರ್ಗೆ ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. 2013ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಪ್ರಿಯಾಂಕ್​ ಪ್ರಥಮ ಯತ್ನದಲ್ಲೇ ಸಚಿವರಾಗಿಯೂ ನೇಮಕವಾಗಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ನಂತರ 2018ರಲ್ಲಿ ಹೆಚ್​ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಇದನ್ನೂ ಓದಿ:ನೂತನ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ

Last Updated : May 20, 2023, 3:38 PM IST

ABOUT THE AUTHOR

...view details