ಬೆಂಗಳೂರು :ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಧಿಕ್ಕರಿಸುವ ವ್ಯರ್ಥ ಪ್ರಯತ್ನವನ್ನು ಉದ್ಧವ್ ಠಾಕ್ರೆ ಮಾಡಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಅಪಚಾರ ಮಾಡುತ್ತಿರುವ ಠಾಕ್ರೆ ಹೇಳಿಕೆಯನ್ನು ಬಿಜೆಪಿ ತಿರಸ್ಕರಿಸುತ್ತದೆ ಎಂದು ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಸೇನೆಗೆ ಬೆಂಬಲಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಯಾಕೆ ಸುಮ್ಮನಿದ್ದಾರೆ? ಉದ್ಧವ್ ಠಾಕ್ರೆ ಹೇಳಿಕೆಯನ್ನು ಅವರು ಸಮರ್ಥನೆ ಮಾಡುತ್ತಾರಾ? ಯಾವುದೇ ಸ್ಪಷ್ಟೀಕರಣ ಯಾಕೆ ನೀಡಿಲ್ಲ. ಈ ಹೇಳಿಕೆಯನ್ನು ನೀಡದಿರುವಂತೆ ಅವರ ಮೇಲೆ ಯಾಕೆ ಒತ್ತಡ ಹಾಕುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಮಹಾಜನ್ ವರದಿಯನ್ನು ಇಡೀ ದೇಶವೇ ಒಪ್ಪಿದೆ. ಮುಗಿದ ಅಧ್ಯಾಯವನ್ನು ಮತ್ತೆ ಮತ್ತೆ ಕೆದಕಿ ಕ್ಯಾತೆ ಎತ್ತುವ, ಜನರ ಭಾವನೆಯನ್ನು ಕೆರಳಿಸುವ ರೀತಿ ಠಾಕ್ರೆ ಯಾಕೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಈ ಹೇಳಿಕೆ ತಿರಸ್ಕರಿಸಿದ್ದಾರೆ ಎಂದರು.
ಮಹಾರಾಷ್ಟ್ರ ಮುಖ್ಯಮಂತ್ರಿಗಳು ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನವನ್ನು ಗೌರವಿಸುವಂತಹ ಕೆಲಸ ಮಾಡಬೇಕು. ಕರ್ನಾಟಕದ ಗಡಿಪ್ರದೇಶದ ಅನ್ಯಭಾಷಿಕರು ಕನ್ನಡಿಗರು. ಅವರ ಮಾತೃಭಾಷೆ ಬೇರೆಯಾಗಿರಬಹುದು.
ಆದರೆ, ಸರ್ಕಾರ ಅಲ್ಲಿನ ಎಲ್ಲಾ ಭಾಷಿಕರನ್ನು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಘೋಷಣೆಯಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದೆ. ಹಾಗಾಗಿ, ಯಾರೂ ಕೂಡ ಇದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಬದ್ಧತೆ ತೋರಿಸಿಕೊಂಡೇ ಬಂದಿದ್ದೇವೆ. ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದರು.
ಇದನ್ನೂ ಓದಿ...ಮೋದಿ, ಅಮಿತ್ ಶಾ ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರೆ: ಸಿದ್ದರಾಮಯ್ಯ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಮಾತನಾಡಿ, ಉದ್ಧವ್ ಠಾಕ್ರೆ ಬಹಳ ಉದ್ಧಟತನದಿಂದ ವರ್ತಿಸಿದ್ದಾರೆ. ಮುಖ್ಯಮಂತ್ರಿಯಾಗಿ ಇನ್ನೊಂದು ರಾಜ್ಯದ ಗಡಿಗಳ ಬಗ್ಗೆ ಮಾತನಾಡುವುದು ಅವರ ವ್ಯಾಪ್ತಿಗೆ ಬರುವುದಿಲ್ಲ. ಈಗಾಗಲೇ ಮಹಾಜನ್ ವರದಿಯನ್ನು ಎರಡು ರಾಜ್ಯಗಳು ಒಪ್ಪಿಕೊಂಡಾಗಿದೆ. ಈ ವಿಷಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಸುಖಾಸುಮ್ಮನೆ ಕ್ಯಾತೆ ತೆಗೆಯುವುದು ಅವರಿಗೆ ಗೌರವ ತರುವುದಿಲ್ಲ ಎಂದರು.