ಬೆಂಗಳೂರು:ಪುನರ್ ವಿಂಗಡಣೆಯಾದ ನಂತರ ನಾಲ್ಕನೇ ಬಾರಿ ಚುನಾವಣೆ ನಡೆಯುತ್ತಿರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ನಗರದ ಜೊತೆಗೆ ಗ್ರಾಮೀಣ ಪ್ರದೇಶ ಸಹ ಒಳಗೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಂಚೂಣಿ ನಾಯಕನಾಗಿ ಹೊರ ಹೊಮ್ಮುತ್ತಿರುವ ಯುವ ನಾಯಕ, ಹಾಲಿ ಶಾಸಕ ಕೃಷ್ಣಬೈರೇಗೌಡ ಅವರು ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.
ಈ ಬಾರಿಯೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅವರು, ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನೇ ನೆಚ್ಚಿಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಇನ್ನು ತನ್ನ ವಶಕ್ಕೆ ಪಡೆಯಲು ಬಿಜೆಪಿಯೂ ಸತತ ಪ್ರಯತ್ನ ನಡೆಸುತ್ತಲೇ ಇದೆ. ಇದೀಗ ಕಾಂಗ್ರೆಸ್ನ ವೇಗಕ್ಕೆ ಕಡಿವಾಣ ಹಾಕಲು ಬಿಜೆಪಿ ಸಹ ಸಜ್ಜುಗೊಂಡಿದೆ. ಕಂದಾಯ ಸಚಿವ ಆರ್. ಅಶೋಕ್ ಅವರ ಸೋದರ ಸಂಬಂಧಿಯೂ ಆಗಿರುವ ಎ.ರವಿ ಅವರು, ಸತತ ಮೂರು ಬಾರಿ ಸೋಲು ಕಂಡಿದ್ದಾರೆ. ಈ ಬಾರಿಯೂ ಅವರೇ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಬಿಜೆಪಿ ತಂತ್ರ:ಕಳೆದ ಬಾರಿ ಕೇವಲ 5,671 ಮತಗಳ ಅಂತರದಿಂದ ಸೋಲು ಕಂಡಿದ್ದ ರವಿ ಅವರು, ಸೋಲಿನ ಅನುಕಂಪದ ಅಲೆಯನ್ನು ಗಿಟ್ಟಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿದೆ. ಈಗಾಗಲೇ ಆಕಾಂಕ್ಷಿಗಳು ಹಾಗೂ ನಾಯಕರು ಕ್ಷೇತ್ರದಲ್ಲಿ ಸುತ್ತಿ ಮತದಾರರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಇನ್ನು ಕೆ.ಎ. ಮುನೀಂದ್ರಕುಮಾರ್, ತಿಮ್ಮೇಶ್ ಗೌಡ, ಎನ್.ಚಕ್ರಪಾಣಿ ಕೂಡ ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅವರೂ ಸಹ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ:ಇನ್ನು ಜೆಡಿಎಸ್ ಈಗಾಗಲೇ ವೇಣುಗೋಪಾಲ್ ಅವರಿಗೆ ಟಿಕೆಟ್ ಘೋಷಿಸಿದೆ. ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಟಿ.ಜಿ. ಚಂದ್ರಣ್ಣ, ಕೇವಲ 22,490 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ ನಡುವೆ ಜೆಡಿಎಸ್ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಹಾಗೂ ಪರಿಶಿಷ್ಟ ಸಮುದಾಯದವರೇ ನಿರ್ಣಾಯಕರು. ತೆಲುಗು, ತಮಿಳು, ಹಿಂದೆ ಸೇರಿದಂತೆ ವಿವಿಧ ಭಾಷೆಗಳ ಜನರು ಸಹ ಈ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಅಪಾರ್ಟ್ಮೆಂಟ್ಗಳು, ಗಾರ್ಮೆಂಟ್ಸ್ ಈ ಕ್ಷೇತ್ರದಲ್ಲಿ ಹೆಚ್ಚು ಇದೆ. ಇದರ ಜೊತೆಗೆ ಮಧ್ಯಮವರ್ಗದ ಮತದಾರರೇ ಹೆಚ್ಚು.
ಹಲವು ಕಾಮಗಾರಿಗಳು ನನೆಗುದಿಗೆ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಬ್ಯಾಟರಾಯನಪುರ ಕ್ಷೇತ್ರ ವಾಣಿಜ್ಯ ವಹಿವಾಟಿನಲ್ಲೂ ಮುಂದೆ ಇದೆ. ಆದರೆ, ಮೂಲ ಸೌಕರ್ಯಗಳ ಸಮಸ್ಯೆಯಿಂದ ಈ ಕ್ಷೇತ್ರವೂ ಹೊರತಾಗಿಲ್ಲ. ಜಕ್ಕೂರು ಮತ್ತು ಯಲಹಂಕ ಸಂಪರ್ಕಿಸುವ ರೈಲ್ವೆ ಫ್ಲೈಓವರ್ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಾತನೂರು, ಶ್ರೀನಿವಾಸಪುರ, ಕಟ್ಟಿಗೇನಹಳ್ಳಿ, ಥಳಿಸಂದ್ರ, ಬ್ಯಾಟರಾಯನಪುರ, ಜಕ್ಕೂರು, ಅಮೃತಹಳ್ಳಿ, ಅಮೃತನಗರ, ಹೆಗಡೆ ನಗರ ಸೇರಿದಂತೆ ಹಲವು ಬಡಾವಣೆಗಳು ಒಳಗೊಂಡಿದ್ದು, ಕೆಲ ಬಡಾವಣೆಗಳು ಮೂಲ ಸೌಕರ್ಯಗಳಿಲ್ಲದೇ ಸಮಸ್ಯೆ ಅನುಭವಿಸುತ್ತಿದೆ.