ಬೆಂಗಳೂರು:ಅಮಿತ್ ಶಾ ರಾಜ್ಯಕ್ಕೆ ಬಂದಿರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಅವರು ಹಳೆ ಮೈಸೂರಿಗೆ ಬಂದಿದ್ದರಿಂದ ದಕ್ಷಿಣ ಕರ್ನಾಟಕದಲ್ಲಿಯೂ ಪಕ್ಷಕ್ಕೆ ಸದೃಢಗೊಳ್ಳಲು ಸಹಕಾರಿಯಾಗಲಿದೆ. 2023ರಲ್ಲಿಯೂ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಮಹಾನಗರ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ದೇಶಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧ ಎನ್ನುವ ದೇಶ ಭಕ್ತರ ಪಕ್ಷ ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು ಕೇವಲ ಅಧಿಕಾರಕ್ಕಾಗಿ ಇರುವ ಸದಸ್ಯರಾಗಿದ್ದಾರೆ. ಬಿಜೆಪಿ ಸದಸ್ಯರದ್ದು ದೇಶ ಸೇವೆಯಾಗಿದೆ. ನಾವು ಭಾರತ್ ಮಾತಾ ಕಿ ಜೈ ಎಂದರೆ, ಕಾಂಗ್ರೆಸ್ನವರು ಇಟಲಿ ಮಾತೆಗೆ ಜೈ ಎನ್ನುತ್ತಾರೆ ಎಂದು ಟೀಕಿಸಿದರು.
ಮೋದಿ ಸರ್ಕಾರದ ಗುಜರಾತ್ ಮಾಡೆಲ್:ಈ ದೇಶವನ್ನು ಉಳಿಸಿ ಬೆಳೆಸಿ, ಉಜ್ವಲ ಭವಿಷ್ಯ ರೂಪಿಸುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶದ ಅಖಂಡತೆ, ಏಕತೆ, ಸುರಕ್ಷತೆ, ಆರ್ಥಿಕತೆ ಎಲ್ಲವೂ ಬಿಜೆಪಿ ಮಾಡಲು ಸಾಧ್ಯ. ದೇಶದ ಯಶಸ್ಸಿಗೆ ನೀತಿ, ಸಿದ್ಧಾಂತ, ನಾಯಕತ್ವ, ಕ್ರಿಯಾಶೀಲ ಸದಸ್ಯರು ಮುಖ್ಯ, ನಮಗೆ ಮೋದಿ ನಾಯಕತ್ವ ಸಿಕ್ಕಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತವು ಪ್ರಗತಿಯಲ್ಲಿ ಹಿಂದೆ ಹೋಯಿತು. ಸಿಂಗ್ ಅವರು ಭ್ರಷ್ಟತೆಯಿಂದ ಆಳ್ವಿಕೆ ಮಾಡಿದರು. ಇದಕ್ಕೆಲ್ಲ ಮೋದಿ ಸರ್ಕಾರ ಗುಜರಾತ್ ಮಾಡೆಲ್ ಮೂಲಕ ಎಲ್ಲದಕ್ಕೆ ಇತಿಶ್ರೀ ಹಾಡಿದೆ ಎಂದರು.
ಕಾಶ್ಮೀರವು ಇಷ್ಟು ವರ್ಷ ಯಾಕೆ ವಿಶೇಷ ಸ್ಥಾನಮಾನದಿಂದ ಮುಕ್ತವಾಗಲಿಲ್ಲ? ಗಡಿ, ನೆಲ ಜಲ ರಕ್ಷಣೆ ಮಾಡದವರು ದೇಶಕ್ಕೆ ಬೇಡ ಎನ್ನುವ ತೀರ್ಮಾನವನ್ನು ಜನರು ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು ಕರ್ನಾಟಕವನ್ನು ಹಿಂದುಳಿದ ರಾಜ್ಯವನ್ನಾಗಿ ಮಾಡಿತ್ತು. ಕೋವಿಡ್ ಇಲ್ಲದಿದ್ದರೂ ಎರಡು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದರು. ಆದರೂ ನಮಗೆ ಸಾಲ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದರು.