ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮೇಲುಸೇತುವೆಯಲ್ಲಿ ನಡೆದ ರಸ್ತೆ ಅಪಘಾತ ದುರಂತ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದ್ದು, ಚಾಲಕನೊಬ್ಬ ಅಡ್ಡಾದಿಡ್ಡಿಯಾಗಿ ಟೆಂಪೊ ಟ್ರಾವೆಲರ್ (ಟಿಟಿ) ವಾಹನ ಚಾಲನೆ ಮಾಡಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಪೀಣ್ಯ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ ಟಿ.ದಾಸರಹಳ್ಳಿಯ ಚೊಕ್ಕಸಂದ್ರ ಲೇಕ್ ಬಳಿ ಈ ದುರ್ಘಟನೆ ಸಂಭವಿಸಿದೆ. ಅವಘಡದಲ್ಲಿ ಸ್ಥಳೀಯ ನಿವಾಸಿ ಬಸವರಾಜ್ ಎಂಬುವರು ಮೃತಪಟ್ಟರೆ, ಮತ್ತೋರ್ವ ಬೈಕ್ ಸವಾರ ಅಲಿ ಎಂಬುವರು ಗಂಭೀರ ಗಾಯಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣರಾದ ಟಿಟಿ ವಾಹನ ಜೊತೆ ಚಾಲಕ ಸುರೇಶ್ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೀಣ್ಯ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ:
ಬುಧವಾರ ಮಧ್ಯಾಹ್ನ ಚೊಕ್ಕಸಂದ್ರ ಬಳಿ ವೇಗವಾಗಿ ಬಂದ ಟಿಟಿ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಸವಾರರಿಗೆ ಗುದ್ದಿದೆ. ಅಪಘಾತದ ರಭಸಕ್ಕೆ ಎರಡು ಬೈಕ್ಗಳು ಸಂಪೂರ್ಣ ಜಖಂಗೊಂಡಿವೆ. ಅದೃಷ್ಟವಶಾತ್ ಟಿಟಿಯಲ್ಲಿದ್ದವರಿಗೆ ಏನು ಆಗಿಲ್ಲ. ಆದರೆ ಒಬ್ಬ ಬೈಕ್ ಸವಾರ ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಕುಡಿದ ಮತ್ತಿನಲ್ಲಿ ಟಿಟಿ ಚಾಲನೆ:
ಅಪಘಾತಕ್ಕೆ ಕಾರಣವಾಗಿರುವ ಟಿಟಿ ವಾಹನದ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಎನ್ನಲಾಗುತ್ತಿದೆ. ಸದ್ಯ ಚಾಲಕ ಸುರೇಶ್ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮದ್ಯ ಸೇವನೆ ಮಾಡಿದ್ದಾನ ? ಎಂಬುದನ್ನು ಪತ್ತೆ ಹಚ್ಚಲು ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ವೈದ್ಯಕೀಯ ವರದಿ ಬಂದ ಬಳಿಕ ಅಪಘಾತಕ್ಕೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಅಪಘಾತ ಪ್ರಕರಣ... ವೇಗದ ಚಾಲನೆಯೇ ದುರಂತಕ್ಕೆ ಕಾರಣ : ಟ್ರಾಫಿಕ್ ಕಮಿಷನರ್