ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರದಿಂದ ಎಸ್​ಐಟಿ ಅಸ್ತ್ರ... ಬಿಜೆಪಿ ಸರ್ಕಾರ ರಚನೆ ಕನಸಿಗೆ 'ಕೈ' ಪ್ರತಿತಂತ್ರ

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಕುರಿತು ಎಚ್ಚೆತ್ತುಕೊಂಡಿರುವ ಕಾಂಗ್ರೆಸ್​, ಜೆಡಿಎಸ್​ ನಾಯಕರು ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಮೈತ್ರಿ ಸರ್ಕಾರದಿಂದ ಎಸ್.ಐ.ಟಿ ರಚನೆ

By

Published : May 12, 2019, 3:21 AM IST

ಬೆಂಗಳೂರು :ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಸರ್ಕಾರ ರಚನೆಗೆ ತಂತ್ರ ರೂಪಿಸುತ್ತಿರುವ ಬಿಜೆಪಿ ಕಟ್ಟಿಹಾಕಲು ಮೈತ್ರಿ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಆಪರೇಷನ್ ಕಮಲಕ್ಕೆ ಕಡಿವಾಣ ಹಾಕಲು ಎಸ್​​ಐಟಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಸಾಧ್ಯತೆ ಕುರಿತು ಎಚ್ಚೆತ್ತುಕೊಂಡಿರುವ ಮೈತ್ರಿ ನಾಯಕರು ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಶತಾಯ ಗತಾಯ ಸರ್ಕಾರವನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿರುವ ಕಾಂಗ್ರೆಸ್​ ದಳಪತಿಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯಡಿಯೂರಪ್ಪ ಮತ್ತು ಅವರ ತಂಡವನ್ನು ಕಾನೂನು ಕುಣಿಕೆಯಲ್ಲಿ ಸಿಲುಕಿಸುವ ಪ್ಲಾನ್​ ಹಾಕಿದ್ದಾರೆಂದು ತಿಳಿದು ಬಂದಿದೆ.

ಈಗಾಗಲೇ ಆಪರೇಷನ್ ಕಮಲದ ಆಡಿಯೋ ವಿವಾದ ವಿಧಾನಸೌಧದಲ್ಲಿ ಪ್ರತಿಧ್ವನಿಸಿ ವಿಶೇಷ ತನಿಖಾ ತಂಡ ರಚನೆಗೆ ನಿರ್ಧರಿಸಿತ್ತು. ಸ್ಪೀಕರ್‌ ಹೆಸರೂ ಕೇಳಿ ಬಂದಿದ್ದರಿಂದ ಸ್ವತಃ ಸ್ಪೀಕರ್ ರಮೇಶ್ ಕುಮಾರ್ ತನಿಖೆಗೆ ಆಗ್ರಹಿಸಿದ್ದರಿಂದ ಎಸ್​ಐಟಿ ರಚನೆಗೆ ಸರ್ಕಾರ ಸಮ್ಮತಿಸಿತ್ತು ಆದರೆ ತಂಡವನ್ನು ರಚಿಸಿರಲಿಲ್ಲ. ಇದೀಗ ಅಂದಿನ ನಿರ್ಧಾರವನ್ನು ಅನುಷ್ಠಾನಕ್ಕೆ ತರಲು ಮೈತ್ರಿ ಸರ್ಕಾರ ಮುಂದಾಗಿದೆ.

ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡರನ್ನು ಸೆಳೆಯಲು ರಾಯದುರ್ಗ ಅತಿಥಿ ಗೃಹದಲ್ಲಿ ಯಡಿಯೂರಪ್ಪ , ಶಿವನಗೌಡ ನಾಯಕ್ , ಪ್ರೀತಂ ಗೌಡ ಪ್ರಯತ್ನ ನಡೆಸಿದ್ದರು ಎನ್ನಲಾದ ಆಡಿಯೋ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಶಿವನಗೌಡ ನಾಯಕ್, ಪ್ರೀತಂ ಗೌಡ, ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ ನಾರಾಯಣ್, ಬಿ.ಶ್ರೀರಾಮುಲು, ಬಿ.ವೈ. ವಿಜಯೇಂದ್ರ , ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರನ್ನ ಆರೋಪಿಗಳನ್ನಾಗಿ ಮಾಡುವ ಸಾಧ್ಯತೆ ಇದ್ದು, ವಿಶೇಷ ತನಿಖಾ ತಂಡದಿಂದ ಪ್ರಕರಣದ ತನಿಖೆ ನಡೆಸಲು ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣೆಯ ನೀತಿ‌ಸಂಹಿತೆ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆ ವಿಶೇಷ ತನಿಖಾ ತಂಡವನ್ನು‌ ರಚಿಸಿ ತನಿಖೆ ಆರಂಭಿಸಲು ನಿರ್ಧರಿಸಲಾಗಿದೆ. ಜೊತೆಗೆ ಈಗಾಗಲೇ ಈ ಸಂಬಂಧ ಐಟಿ ಇಲಾಖೆ ಹಾಗೂ ಎಸಿಬಿಗೆ ನೀಡಿರುವ ದೂರುಗಳನ್ನು ಸಹ ಎಸ್​​ಐಟಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ವಿಶೇಷ ತನಿಖಾ ತಂಡ‌ ರಚನೆಗೆ ನಿರ್ಧರಿಸಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ಸಕಲ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಎಸ್ಐಟಿ‌ ರಚನೆಯಾಗುತ್ತಿದ್ದಂತೆ ಮೈತ್ರಿ ಸರ್ಕಾರದ ಶಾಸಕರಿಂದ ಬಿಜೆಪಿ ವಿರುದ್ಧ ದೂರು ಕೊಡಿಸಲು ಸಿದ್ದತೆ ನಡೆದಿದೆ. ಆಪರೇಷನ್ ಕಮಲ, ಹಣದ ಆಮಿಷ ಸಂಬಂಧ ದೂರು ಸಲ್ಲಿಕೆ ಮಾಡಲಾಗುತ್ತದೆ ಎಂದು ಮೈತ್ರಿ ಸರ್ಕಾರದ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಯಡಿಯೂರಪ್ಪ ತಂಡದ ವಿರುದ್ಧ ಎಫ್.ಐ.ಆರ್ ದಾಖಲಾದರೆ ನಿರೀಕ್ಷಣಾ ಜಾಮೀನು, ಎಸ್.ಐ.ಟಿ ವಿಚಾರಣೆ ಇತ್ಯಾದಿಗಳ ಮೂಲಕ ಕಾನೂನು ಸಂಕೋಲೆಯಲ್ಲಿ ಸಿಲುಕಿಸುವ ಮೂಲಕ ಬಿಜೆಪಿ ಸರ್ಕಾರ ರಚನೆ ಪ್ರಯತ್ನಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ.

ಈ ಸಂಬಂಧ ಈಗಾಗಲೇ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ನಾಯಕರು ಮಾತುಕತೆ ನಡೆಸಿ ಪರಸ್ಪರ ಸಮ್ಮತಿ ಮೇರೆಗೆ ಈ ಹೆಜ್ಜೆ ಇಡಲು ಮುಂದಾಗಿದ್ದಾರೆ. ಎಸ್.ಐ.ಟಿ ಆರಂಭವಾಗುತ್ತಿದ್ದಂತೆಯೇ ಬಿಜೆಪಿಯ ಘಟಾನುಘಟಿ ನಾಯಕರನ್ನು ಎಸ್ಐಟಿ ಬಲೆಯೊಳಗೆ ಸಿಲುಕಿಸಲು ಈಗಾಗಲೇ ತಂತ್ರ ರೂಪಿಸಿದ್ದು , ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳು, ಮಾಹಿತಿ ಸಂಗ್ರಹದಲ್ಲಿ, ಮೈತ್ರಿ ನಾಯಕರು ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details