ಬೆಂಗಳೂರು:25ನೇ ವರ್ಷದ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಶುಕ್ರವಾರ ತೆರೆ ಬಿದ್ದಿತು. ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಸರ್ಕಾರದ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಐದು ಘೋಷಣೆಗಳನ್ನು ಘೋಷಿಸಿದರು.
- ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಟಾರ್ಟಪ್ ಪಾರ್ಕ್.
- 50 ಕಾಲೇಜುಗಳಲ್ಲಿ ಆಧುನಿಕ ತಾಂತ್ರಿಕ ಪ್ರಯೋಗಾಲಯಗಳು.
- ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳ ಆರಂಭ.
- ಶಿಕ್ಷಣ ಸಂಸ್ಥೆಗಳು ಮತ್ತು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಕಂಪನಿಗಳ ನಡುವೆ ಗಾಢ ಸಂಬಂಧ.
- ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ನಿಕಟ ಬಾಂಧವ್ಯ.
ಈ ಐದು ಹೆಗ್ಗುರಿಗಳ ಘೋಷಣೆಗಳೊಂದಿಗೆ 25ನೇ ವರ್ಷದ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಶುಕ್ರವಾರ ತೆರೆ ಬಿದ್ದಿತ್ತು. ಐಟಿ-ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಅವರು ಸರ್ಕಾರದ ಪರವಾಗಿ ಸಮಾರೋಪದಲ್ಲಿ ಈ ಗುರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸಮ್ಮುಖದಲ್ಲಿ ಘೋಷಿಸಿದರು.
12 ಒಡಂಬಡಿಕೆಗಳಿಗೆ ಅಂಕಿತ:ಈ ವೇಳೆ ಮಾತನಾಡಿದ ಸಚಿವರು, ಒಟ್ಟು 32 ದೇಶಗಳು ಪಾಲ್ಗೊಂಡಿದ್ದ ಸಮಾವೇಶದಲ್ಲಿ 4.52 ಲಕ್ಷ ಜನ ಸಕ್ರಿಯವಾಗಿ ಪಾಲ್ಗೊಂಡಿದ್ದು, ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ 4.99 ಕೋಟಿ ಜನರನ್ನು ತಲುಪಿದೆ. ಪ್ರದರ್ಶನ ಮಳಿಗೆಗಳಿಗೆ 50 ಸಾವಿರ ಜನರು ಭೇಟಿ ನೀಡಿದ್ದು, 26 ಸಾವಿರ ನೋಂದಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜತೆಗೆ ವಿವಿಧ ನವೋದ್ಯಮಗಳ 28 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
3 ದೇಶಗಳ ಉನ್ನತ ಮಟ್ಟದ ಸಚಿವರ ನಿಯೋಗಗಳು ಮತ್ತು 9 ರಾಷ್ಟ್ರಗಳ ಉನ್ನತ ನಿಯೋಗಗಳು ಸಮಾವೇಶದಲ್ಲಿ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿವೆ. ಇದಲ್ಲದೆ, ಒಟ್ಟು 12 ಒಡಂಬಡಿಕೆಗಳಿಗೆ ಸಮಾವೇಶದಲ್ಲಿ ಅಂಕಿತ ಹಾಕಲಾಗಿದೆ ಎಂದರು.