ಬೆಂಗಳೂರು : ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ದುರ್ಘಟನೆ ಇಂದು ನಡೆದಿದೆ. ಕೋಡಿಗೆಹಳ್ಳಿ ನಿವಾಸಿ ಮುನಿಯಮ್ಮ (60) ಮೃತ ಮಹಿಳೆ. ಅಪಘಾತ ಹಿನ್ನೆಲೆ ಪೊಲೀಸರು ಲಾರಿ ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಮವಾರ ಮಧ್ಯಾಹ್ನ 1.45 ಗಂಟೆ ವೇಳೆ ಹಡ್ಸನ್ ಸರ್ಕಲ್ ಬಳಿ ಮುನಿಯಮ್ಮ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ಬಂದ ಬಿಬಿಎಂಪಿಗೆ ಸೇರಿದ ಕಸ ಲಾರಿಯು ವೇಗವಾಗಿ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಕುಸಿದು ಬಿದ್ದ ಮಹಿಳೆ ಕಾಲುಗಳ ಮೇಲೆ ಲಾರಿ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಕಾನ್ಸ್ಟೇಬಲ್ ನೆರವಿನಿಂದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಕ್ಯಾಂಟರ್ಗೆ ಕಾರು ಡಿಕ್ಕಿ; ತಾಯಿ ಮಗ ಸಾವು :ಕೊಪ್ಪಳ ತಾಲೂಕಿನ ಮಂಗಳಪುರ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಲಾರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತಾಯಿ ಹಾಗೂ ಮಗ ಮೃತಪಟ್ಟಿರುವ ಘಟನೆ ಜೂನ್ 12 ರಂದು ಸೋಮವಾರ ರಾತ್ರಿ ನಡೆದಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಪುಟ್ಟರಾಜು ವಸ್ತ್ರದ (46) ಹಾಗೂ ಗಂಗಮ್ಮ ವಸ್ತ್ರದ (70) ಮೃತರು. ಗಜೇಂದ್ರಗಡದಿಂದ ಕೊಪ್ಪಳ ಮಾರ್ಗವಾಗಿ ಹೊಸಪೇಟೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಮಂಗಳಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಇಬ್ಬರ ತಲೆಗೂ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಸವಾರನಿಗೆ ಲಾರಿ ಡಿಕ್ಕಿ : ಅತಿ ವೇಗವಾಗಿ ಲಾರಿ ಚಾಲನೆ ಮಾಡಿದ್ದ ಚಾಲಕ ರಸ್ತೆ ವಿಭಜಕಕ್ಕೆ ಗುದ್ದಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್ ಸವಾರನ ಸಾವಿಗೆ ಕಾರಣನಾಗಿದ್ದ ಘಟನೆ ಜೂನ್ 14 ರ ಬೆಳಗ್ಗೆ ನಸುಕಿನಲ್ಲಿ ಜರುಗಿತ್ತು. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ರೋಡ್ ಬಳಿ ಅಪಘಾತ ಸಂಭವಿಸಿ ಬೈಕ್ ಸವಾರ ಸೋಮಶೇಖರ್ ಎಂಬವವರು ಮೃತಪಟ್ಟಿದ್ದಾರೆ. ಇದಲ್ಲದೆ ರಸ್ತೆ ಬದಿಯಲ್ಲಿದ್ದ ಅಂಗಡಿಗೂ ರಭಸದಿಂದ ಲಾರಿ ಗುದ್ದಿದ ಪರಿಣಾಮ ಅಂಗಡಿಯ ಶೆಡ್ ಸೇರಿ ಇನ್ನಿತರ ವಸ್ತುಗಳಿಗೆ ಹಾನಿಯಾಗಿ ಚೆಲ್ಲಾಪಿಲ್ಲಿಯಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಲಾರಿಯನ್ನು ಸ್ಥಳಾಂತರಿಸು ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ಇದನ್ನೂ ಓದಿ :Bangalore accident : ಅತಿವೇಗವಾಗಿ ಬಂದ ಯಮರೂಪಿ ಲಾರಿಗೆ ಸ್ಕೂಟರ್ ಸವಾರ ಬಲಿ; ಅಂಗಡಿಯೂ ನೆಲಸಮ