ಬೆಂಗಳೂರು :ಜೆಡಿಎಸ್ ಪಕ್ಷವು ಗೋಹತ್ಯೆ ನಿಷೇಧ ಕಾನೂನಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇಂದು ಉಲ್ಟಾ ಹೊಡೆದಿದ್ದಾರೆ. ನಾನು ಹಾಗೂ ನಮ್ಮ ಪಕ್ಷದ ನಾಯಕರು ಗೋಹತ್ಯೆ ನಿಷೇಧ ಕಾನೂನನ್ನು ವಿರೋಧ ಮಾಡುತ್ತೇವೆ ಎಂದು ಮತ್ತೆ ತಮ್ಮ ನಿಲುವು ಬದಲಿಸಿದ್ದಾರೆ.
ನಿನ್ನೆ ಜಂಟಿ ಅಧಿವೇಶನ ಪ್ರಾರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ್ದ ಅವರು, ಮುಂಬರುವ ಕಲಾಪದಲ್ಲಿ ಗೋಹತ್ಯೆ ನಿಷೇಧ ಕಾನೂನು ಚರ್ಚೆಗೆ ಬಂದಾಗ ಅದನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟನೆ.. ಓದಿ:ಗೋಹತ್ಯೆ ನಿಷೇಧ ಮಸೂದೆಗೆ ಬೆಂಬಲ: ಬದಲಾದ ಜೆಡಿಎಸ್ ನಿಲುವು!
ಇಂದು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಗೋಹತ್ಯೆ ನಿಷೇಧ ಕಾನೂನಿಗೆ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದ್ದು ನಿಜ. ಆದರೆ, ನನ್ನ ಬಳಿ ಹೈನುಗಾರಿಕೆ ಬಗ್ಗೆ ಸಾಕಷ್ಟು ಮಾಹಿತಿಯಿದೆ.
ಉತ್ತರಪ್ರದೇಶದ ರೀತಿ ಗೋಹತ್ಯೆ ನಿಷೇಧ ಕಾನೂನು ತಂದ ಸಂದರ್ಭದಲ್ಲಿ ಸಂಪೂರ್ಣ ಸರ್ಕಾರ ದನ ಕಾಯೋಕೆ ಹೋಗಬೇಕು ಎಂದು ನಾನು ಅಂಕಣ ಬರೆದಿದ್ದೆ ಎಂದರು. ನಾನು ಹೇಳಿದ್ದ ಒಂದು ವಾಕ್ಯವನ್ನು ಇಟ್ಟುಕೊಂಡು ತಿರುಚುವುದು ಬೇಡ. ಅದಕ್ಕಾಗಿ ನಾನು ಸ್ಪಷ್ಟೀಕರಣ ಕೊಡುತ್ತಿದ್ದೇನೆ ಎಂದು ಹೇಳಿದರು.
ನಮ್ಮ ಮನೆಯಲ್ಲಿ 136 ಹಸುಗಳು ಇವೆ, ನಾನು ಹಾಗೂ ನಮ್ಮ ಪಕ್ಷದ ನಾಯಕರು ಗೋಹತ್ಯೆ ನಿಷೇಧ ಕಾನೂನನ್ನು ವಿರೋಧ ಮಾಡುತ್ತೇವೆ. ಇದನ್ನು ಮಾಧ್ಯಮದವರು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.