ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕದಿದ್ದರೆ ಮತ್ತೊಮ್ಮೆ ವಚನ ಭ್ರಷ್ಟರಾಗುತ್ತಾರೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ರಮೇಶ್ ಕುಮಾರ್ ಸಾರ್ವಜನಿಕವಾಗಿ ಮಾತು ಕೊಟ್ಟರೆ ತಪ್ಪಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ರು.
ಮೈತ್ರಿ ಸರ್ಕಾರ ಉಳಿಸಲು ಏನೇನೋ ಕಸರತ್ತು ಮಾಡುತ್ತಿದ್ದಾರೆ. ಬಹುಮತ ಕಳೆದುಕೊಂಡಿರುವುದರಿಂದ ಕುಮಾರಸ್ವಾಮಿ ಗೌರವದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುವುದು ಉತ್ತಮ ಎಂದರು.
ಡಿ.ಕೆ ಶಿವಕುಮಾರ್ ಹಾಗೂ ಕೆಲ ನಾಯಕರು ಸದನದಲ್ಲಿ ನೀಡಿದ ಹೇಳಿಕೆ ರೆಬೆಲ್ ಶಾಸಕರಲ್ಲಿ ಬೇಸರ ಮೂಡಿಸಿದೆ. ಕಾಂಗ್ರೆಸ್, ಜೆಡಿಎಸ್ನ ಇನ್ನೂ ಸಾಕಷ್ಟು ಶಾಸಕರಲ್ಲಿ ಅತೃಪ್ತಿ ಇದೆ. ಶಾಸಕ ನಾಗೇಂದ್ರ ಬಿಜೆಪಿಗೆ ಬೆಂಬಲ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದರು.
ನಾಳೆಯ ಕಲಾಪದ ಮೇಲೆ ಸುಪ್ರೀಂಕೋರ್ಟ್ ತೀರ್ಪು ಪ್ರಭಾವ ಬೀರುತ್ತದೆ. ಸುಪ್ರೀಂ ಮಧ್ಯಾಹ್ನದೊಳಗೆ ತೀರ್ಪು ನೀಡಬಹುದು. ಆ ತೀರ್ಪು ಆಧರಿಸಿ ನಮ್ಮ ಮುಂದಿನ ರಣನೀತಿ ಇರುತ್ತದೆ ಎಂದು ಬೊಮ್ಮಾಯಿ ಹೇಳಿದ್ರು.