ಕರ್ನಾಟಕ

karnataka

ETV Bharat / state

ಬೆಂಗಳೂರು ಗಲಭೆ ಕೇಸ್.. ನಷ್ಟ ಕ್ಲೇಮ್​ಗೆ ಅರ್ಜಿ ಆಹ್ವಾನಿಸಿರುವ ಬಗ್ಗೆ ಹೈಕೋರ್ಟ್​ಗೆ ಸರ್ಕಾರದ ಮಾಹಿತಿ

ಅರ್ಜಿಯನ್ನು ನಗರದ ಅರಮನೆ ರಸ್ತೆಯಲ್ಲಿರುವ ಬಾಲಬ್ರೂಹಿ ಅತಿಥಿಗೃಹ ಕಟ್ಟಡದಲ್ಲಿರುವ ಮೊದಲನೇ ಮಹಡಿಯಲ್ಲಿರುವ ಕಚೇರಿಗೆ ನೇರವಾಗಿ ತೆರಳಿ ಸಲ್ಲಿಸಬಹುದು. ಅಥವಾ ಇದೇ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಕೊರಿಯರ್ ಮೂಲಕವೂ ಸಲ್ಲಿಸಬಹುದು..

By

Published : Jan 30, 2021, 2:40 PM IST

update
ಸರ್ಕಾರ

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ನಷ್ಟ ಅನುಭವಿಸಿರುವವರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಸೂಚಿಸಿ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ ಎಂದು ಹೈಕೋರ್ಟ್​ಗೆ ರಾಜ್ಯಸರ್ಕಾರ ಮಾಹಿತಿ ನೀಡಿದೆ.
ಈ ಕುರಿತು ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ಹಾಗೂ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, 2020ರ ಆಗಸ್ಟ್ 11ರಂದು ನಡೆದ ಡಿಜೆಹಳ್ಳಿ ಮತ್ತು ಕೆಜೆಹಳ್ಳಿ ಗಲಭೆ ಪ್ರಕರಣದಲ್ಲಿ ವಾಹನ ಸೇರಿದಂತೆ ಆಸ್ತಿ ನಷ್ಟ ಅನುಭವಿಸಿದವರು, ಹಾನಿಗೊಳಗಾದವರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಸೂಚನೆ ನೀಡಿ ಜನವರಿ 28ರಂದು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದೇವೆ ಎಂದು ತಿಳಿಸಿದರು.

ಅಲ್ಲದೇ, ನ್ಯಾಯಾಲಯದ ನಿರ್ದೇಶನದಂತೆ ನ್ಯಾ. ಕೆಂಪಣ್ಣ ನೇತೃತ್ವದ ಕ್ಲೇಮ್ ಕಮಿಷನ್​​ಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು, ಕಮಿಷನ್ ಕಾರ್ಯಾರಂಭ ಮಾಡಿದೆ ಎಂದು ವಿವರಿಸಿದರು. ಪರಿಹಾರ ಕೋರಿ ಅರ್ಜಿ ಸಲ್ಲಿಸುವವರು ಕ್ಲೇಮ್ ಕಮಿಷನರ್​ಗೆ ಫೆಬ್ರವರಿ 28ರೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿಯನ್ನು ನಗರದ ಅರಮನೆ ರಸ್ತೆಯಲ್ಲಿರುವ ಬಾಲಬ್ರೂಹಿ ಅತಿಥಿಗೃಹ ಕಟ್ಟಡದಲ್ಲಿರುವ ಮೊದಲನೆ ಮಹಡಿಯಲ್ಲಿರುವ ಕಚೇರಿಗೆ ನೇರವಾಗಿ ತೆರಳಿ ಸಲ್ಲಿಸಬಹುದು. ಅಥವಾ ಇದೇ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಕೊರಿಯರ್ ಮೂಲಕವೂ ಸಲ್ಲಿಸಬಹುದು.

ಪರಿಹಾರ ಕೋರಿ ಅರ್ಜಿ ಸಲ್ಲಿಸುವವರು ತಮ್ಮ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸದೊಂದಿಗೆ, ಘಟನೆಗೆ ಸಂಬಂಧಿಸಿದ ವಿಡಿಯೋ, ಆಡಿಯೋಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೆ, ಆಸ್ತಿ ಹಾನಿ, ನಷ್ಟ ಉಂಟು ಮಾಡಿದ್ದವರ ಮಾಹಿತಿ ಇದ್ದರೂ ಕಳಿಸಬಹುದು ಎಂದು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ವಿಚಾರಣೆ ಮುಂದೂಡಿತು.

ABOUT THE AUTHOR

...view details