ಬೆಂಗಳೂರು: ಒಬ್ಬ ಶಾಸಕಿಯಾಗಿ, ಹೆಣ್ಣು ಮಗಳಾಗಿ, ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಬೇಕು. ಅದು ಬಿಟ್ಟು ಇನ್ನೊಬ್ಬ ಹೆಣ್ಣು ಮಗಳ ಮೇಲೆ ಕೈ ಮಾಡುವುದು ಸರಿಯೇ? ದುಡಿದು ಬಾಳುವುದು ಮಹಿಳಾ ಸಬಲೀಕರಣವೋ? ಹೊಡೆದು ಬಾಳುವುದೋ ಎಂದು ಶಾಸಕಿ ಸೌಮ್ಯರೆಡ್ಡಿಗೆ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ಪ್ರತಿಭಟನೆ ಇರುವುದು ಸರ್ಕಾರದ ವಿರುದ್ಧ. ಆದರೆ ಮಹಿಳಾ ಕಾನ್ಸ್ಟೇಬಲ್ ಮೇಲೇಕೆ ದರ್ಪ ತೋರಿಸುತ್ತೀರಿ? ಒಬ್ಬ ಯುವ ನಾಯಕ ಸ್ನೇಹಿತನ ಮೇಲೆ ಹಲ್ಲೆ ಮಾಡಿದರೆ, ಇಲ್ಲೊಬ್ಬ ಯುವ ನಾಯಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿಯೇ? ಜನತೆಗೆ ನಿಮ್ಮಂತೆ ಬಾಳುವ ಹಕ್ಕಿಲ್ಲವೇ ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವ, ಜನಪರತೆ ಎಂಬುದು ಬಾಯಿಮಾತಿಗಷ್ಟೇ ಸೀಮಿತವಾಗಿದ್ದು, ಪ್ರತಿಭಟನೆ ಹೆಸರಿನಲ್ಲಿ ಶಾಸಕಿ ಸೌಮ್ಯರೆಡ್ಡಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಕೂಡಲೇ ಅವರು ಮಹಿಳಾ ಪೊಲೀಸರ ಕ್ಷಮೆಯಾಚಿಸಬೇಕು ಎಂದು ಸಚಿವ ಶ್ರೀರಾಮುಲು ಆಗ್ರಹಿಸಿದ್ದಾರೆ.
ಓದಿ:ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಬಲ ಪ್ರದರ್ಶಿಸಿದ್ರೇ ಶಾಸಕಿ ಸೌಮ್ಯರೆಡ್ಡಿ!?
ದಶಕಗಳವರೆಗೆ ದೇಶವನ್ನಾಳಿದ ಕಾಂಗ್ರೆಸ್ ಪ್ರತಿ ಚುನಾವಣೆ ಬಂದಾಗಲೂ ರೈತರ ಕಲ್ಯಾಣ ಎಂದು ಬೊಗಳೆ ಬಿಟ್ಟಿತೇ ಹೊರತು ಕಾರ್ಯರೂಪಕ್ಕೆ ತರಲಿಲ್ಲ. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಳೆಗಳಿಗೆ ಶೇ.43 ಬೆಂಬಲ ಬೆಲೆ ಹೆಚ್ಚಿಸಿದೆ. ನೀರಾವರಿ ವ್ಯವಸ್ಥೆಯನ್ನು ಶೇ.45ರಷ್ಟು ಜಾಸ್ತಿ ಮಾಡಿದೆ. ವಿನಾಕಾರಣ ಕಾಂಗ್ರೆಸ್ ಕೃಷಿ ಕಾಯ್ದೆ ವಿರೋಧಿಸುತ್ತಿದೆ. ಸುಳ್ಳು ಹೇಳುತ್ತಿದೆ. ಎಪಿಎಂಸಿ ಸುಧಾರಣೆಯಿಂದ ಬ್ಯಾಡಗಿ ಮೆಣಸಿನಕಾಯಿಗೆ ಭಾರಿ ಬೆಲೆ ಬಂದಿದೆ. ರಾಯಚೂರಿನ ಸಾವಿರಾರು ರೈತರು ಬೆಂಬಲ ಬೆಲೆಗಿಂತ ಹೆಚ್ಚಿನ ದರಕ್ಕೆ ಭತ್ತ ಮಾರಿದ್ದಾರೆ. ಅನ್ನದಾತರಿಗೆ ಹೆಚ್ಚಿನ ಬೆಲೆ ಸಿಗುವುದು ಬೇಡವೇ ಎಂದು ರಾಮುಲು ಪ್ರಶ್ನಿಸಿದ್ದಾರೆ.
ದಿಲ್ಲಿಯಿಂದ 1.ರೂ. ಬಿಡುಗಡೆಯಾದರೆ, ಅದು ಹಳ್ಳಿ ತಲುಪುವ ವೇಳೆ 15 ಪೈಸೆಯಾಗುತ್ತದೆ ಎಂದು ಇದೇ ಕಾಂಗ್ರೆಸ್ಸಿನ ರಾಜೀವ್ ಗಾಂಧಿಯವರು ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡಿದ್ದರು. ಆದರೆ, ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ರೈತರ ಖಾತೆಗೆ 6 ಸಾವಿರ ರೂ. ನೇರವಾಗಿ ಜಮೆಯಾಗುತ್ತಿದೆ ಎಂದು ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.