ಬೆಂಗಳೂರು: ಕದ್ದ ಮೊಬೈಲ್‌ಗಳಿಗೆ ಫ್ಲ್ಯಾಶ್ ಮಾಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ ಆರೋಪದಡಿ ಯುವತಿ ಸೇರಿದಂತೆ ಮೂವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಗ್ಗಡೆ ನಗರದ ನಿವಾಸಿ ಇಮ್ರಾನ್ ಉಲ್ಲಾಖಾನ್ ಎಂಬಾತ ಹಲ್ಲೆಗೊಳಗಾಗಿದ್ದಾನೆ. ಈತ ನೀಡಿದ ದೂರಿನ ಮೇರೆಗೆ ಸಾದಿಯಾ, ಸೊಹೈಲ್ ಹಾಗೂ ಉಮರ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆ ಕೆಲಸ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಇಮ್ರಾನ್, ಫೋನ್ ಪೇ ಕ್ಯೂ ಆರ್ ಕೋಡ್ ಬೋರ್ಡ್ ಹಾಕುವ ಕೆಲಸ ಮಾಡಿಕೊಂಡಿದ್ದರು. ಮೊಬೈಲ್ ಫ್ಲ್ಯಾಶ್ ಮಾಡುವ ಬಗ್ಗೆ ಅರಿತುಕೊಂಡಿದ್ದರು. ಈ ಮಧ್ಯೆ ತಲೆಮರೆಸಿಕೊಂಡಿರುವ ಶಾಹಿದ್ಗೆ ಇಮ್ರಾನ್ ಪರಿಚಯವಾಗಿತ್ತು. ಫ್ಲ್ಯಾಶ್ ಮಾಡುವ ಕಲೆ ಅರಿತಿದ್ದ ಇಮ್ರಾನ್ಗೆ ಶಾಹಿದ್ ಕದ್ದ ಮೊಬೈಲ್ ನೀಡಿ ಪ್ಲ್ಯಾಶ್ ಮಾಡಿಸಿಕೊಂಡಿದ್ದರು. ಅದೇ ರೀತಿ ಸಾದಿಯಾ ಸಹ ತಮ್ಮ ಮೊಬೈಲ್ ನೀಡಿ ರೀ ಸೆಟ್ ಮಾಡಿಸಿಕೊಂಡಿದ್ದಳು.
ಪ್ರತಿನಿತ್ಯ ಮೊಬೈಲ್ ಫ್ಲ್ಯಾಶ್ ಮಾಡಿಸಿಕೊಳ್ಳುವಂತೆ ಆರೋಪಿಗಳು ನೀಡುತ್ತಿರುವುದನ್ನು ಇಮ್ರಾನ್ ಕಂಡು ಅನುಮಾನಗೊಂಡಿದ್ದನು. ಕಳ್ಳತನ ಮಾಡಿದ ಮೊಬೈಲ್‌ಗಳನ್ನು ನೀಡುತ್ತಿರುವ ಬಗ್ಗೆ ಅರಿತು ಮೊಬೈಲ್‌ಗಳನ್ನ ಪ್ಲ್ಯಾಶ್ ಮಾಡಿಸಲು ನಿರಾಕರಿಸಿದ್ದನು. ಅಲ್ಲದೇ ಆರೋಪಿಗಳ ಮೊಬೈಲ್ ಕರೆ ಸ್ವೀಕರಿಸುವುದನ್ನೇ ಬಿಟ್ಟಿದ್ದ. ಇದರಿಂದ ಕೆಂಡಾಮಂಡಲವಾದ ಆರೋಪಿ ಸಾದಿಯಾ ನಿರಂತರ ಪೋನ್ ಮಾಡಿ ಕೊನೆಗೆ ಇಮ್ರಾನ್‌ನನ್ನು ಸಂಪರ್ಕಿಸಿ ಭೇಟಿಯಾಗುವಂತೆ ಹೇಳಿದ್ದಳು.