ಬೆಂಗಳೂರು: ಪ್ರಿಯತಮೆಯ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಅಲ್ಲಿ ಬರುವ ತರಹೇವಾರಿ ಕಾಮೆಂಟ್ಗಳಿಂದ ವಿಕೃತ ಆನಂದ ಪಡೆಯುತ್ತಿದ್ದ ಕಾಮುಕನನ್ನು ಆಗ್ನೇಯ ವಿಭಾಗದ ಸೆನ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ತಮಿಳುನಾಡು ಮೂಲದ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಅಜಯ್ ಎಂಬಾತನನ್ನು ಬಂಧಿಸಲಾಗಿದೆ. ಈತ ತಾನೇ ಪ್ರೀತಿಸಿದ ಯುವತಿಯ ನಗ್ನ ಫೋಟೊ ಶೇರ್ ಮಾಡಿ, ಪೊಲೀಸ್ ಠಾಣೆಗೆ ಬಂದು ತನ್ನ ಹುಡುಗಿಯ ಖಾಸಗಿ ಫೋಟೊ ಶೇರ್ ಮಾಡಿದ್ದಾರೆ ಎಂದು ನಾಟಕವಾಡಿದ್ದ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ.
ಬಿಟಿಎಂ ಲೇಔಟ್ 2ನೇ ಹಂತದಲ್ಲಿ ವಾಸವಾಗಿದ್ದ ಯುವತಿಯು, ಪ್ರಿಯಕರ ಅಜಯ್‌ನೊಂದಿಗೆ ಬಂದು ಯಾರೋ ಅಪರಿಚಿತರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಖಾಸಗಿ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು 2021ರಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಇನ್‌ಸ್ಟಾದಲ್ಲಿರುವ ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಆದರೆ ಕೆಲ ದಿನಗಳ ಹಿಂದೆ ಮತ್ತೆ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವವರ ವಿರುದ್ದ ತನಿಖೆಗೆ ಆಗ್ರಹಿಸಿ ಪ್ರಿಯಕರನ ಸಮ್ಮುಖದಲ್ಲಿ ಯುವತಿ ದೂರು ನೀಡಿದ್ದಳು. @thediyahouse, @_denofd3vil_, @houseofd3vil, @heavenbyd3vil2 ಹೆಸರಿನ ಖಾತೆಯಲ್ಲಿ ತಮ್ಮ ಖಾಸಗಿ ಫೋಟೊ ಪೋಸ್ಟ್ ಆಗಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಳು.
ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಯುವತಿ ನೀಡಿದ ಸಾಮಾಜಿಕ ಜಾಲತಾಣದ ಲಿಂಕ್ಗಳನ್ನು ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿದಾಗ ಯುವತಿ ಜೊತೆ ಬಂದಿದ್ದ ಅಜಯ್ ಎಂಬಾತನೇ ಫೋಟೊಗಳನ್ನು ಪೋಸ್ಟ್ ಮಾಡಿರುವುದನ್ನು ಖಚಿತಪಡಿಸಿಕೊಂಡಿದ್ದರು. ಅಜಯ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಿಸಿದಾಗ ತಾನೇ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಗೆಳತಿಯ ಖಾಸಗಿ ಫೋಟೊಗಳನ್ನು 2021ರಿಂದಲೇ ಈತನೇ ಟೆಲಿಗ್ರಾಂನಲ್ಲಿ ಗ್ರೂಪ್ ಮಾಡಿ ಹರಿಬಿಟ್ಟಿದ್ದ. ತಾನೇ ರಚಿಸಿಕೊಂಡಿದ್ದ ಗ್ರೂಪ್ನಲ್ಲಿ ತಮ್ಮ ಪ್ರಿಯತಮೆ ಹಾಗೂ ಸ್ನೇಹಿತೆಯರ ಖಾಸಗಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದನು. ಅಂತಹ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಲ್ಲಿ ಬರುವ ಕಾಮೆಂಟ್ಗಳನ್ನು ಓದಿ ವಿಕೃತವಾಗಿ ಆನಂದಪಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯ ನಗ್ನಚಿತ್ರ ಹಂಚಿಕೊಂಡ ಪತಿ:ತನ್ನ ಪತ್ನಿಯ ನಗ್ನ ಚಿತ್ರಗಳನ್ನು ತೆಗೆದು ಶೇರ್ ಮಾಡುತ್ತಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ತ್ರಿಶೂರ್ ಜಿಲ್ಲೆಯ ಎರುಮಪೆಟ್ಟಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್ ಮೂಲದ ಮಹಿಳೆಯನ್ನು ಮದುವೆಯಾಗಿದ್ದ ಆರೋಪಿಗೆ ವಧುವಿನ ಕಡೆಯವರು ವರದಕ್ಷಿಣೆಯಾಗಿ 80 ಗ್ರಾಂ ಚಿನ್ನ ನೀಡಿದ್ದರು. ಮದುವೆ ಬಳಿಕ ಹೆಚ್ಚು ಹಣ ನೀಡುವಂತೆ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಪತ್ನಿಯ ನಗ್ನ ಚಿತ್ರಗಳನ್ನು ಆ್ಯಪ್ವೊಂದಕ್ಕೆ ಅಪ್‌ಲೋಡ್ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದರು.
ಇದನ್ನೂ ಓದಿ:ಪುಸ್ತಕ ಖರೀದಿಸಲು ಹಣ ನೀಡದ ಪೋಷಕರು: ಮನನೊಂದು 7ನೇ ತರಗತಿ ಬಾಲಕ ಆತ್ಮಹತ್ಯೆ