ಬೆಂಗಳೂರು: ಸರ್ಕಾರದ 40 ಪರ್ಸೆಂಟ್ ಭ್ರಷ್ಟಾಚಾರದ ಮೇಲಿರುವ ಜನರ ದೃಷ್ಟಿಕೋನ ಬದಲಿಸಲು ಕಾಂಗ್ರೆಸ್ ಮುಖಂಡರನ್ನು ಬಂಧಿಸುವ ಕಾರ್ಯ ಆಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದ ಲಾಂಜ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪರಿಷತ್ನಲ್ಲಿ ಪ್ರಶ್ನೊತ್ತರ ವೇಳೆ, ಶೂನ್ಯ ವೇಳೆಯಲ್ಲಿ ಸರ್ಕಾರ ವಿಧೇಯಕಗಳನ್ನು ಚರ್ಚೆ ಮಾಡದೆ, ಸದನ ಗದ್ದಲದಲ್ಲಿದ್ದಾಗ ಬಿಲ್ಗಳನ್ನು ಪಾಸ್ ಮಾಡಿಕೊಂಡಿದ್ದಾರೆ. ಸರ್ಕಾರ ಸರ್ವಾಧಿಕಾರಿಯಂತೆ ನಡೆದುಕೊಂಡಿದೆ. ಶಿಕ್ಷಣ ಮಸೂದೆ ಚರ್ಚೆ ಆಗದೇ ಪಾಸ್ ಆಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಚೇರಿಗೆ ರಾತ್ರಿ ಎರಡು ಗಂಟೆಗೆ ಹೋಗಿ, ಮಹಿಳೆಯರಿಗೆ ಮಕ್ಕಳಿಗೆ ಹೆದರಿಸಿ, ಇಬ್ಬರನ್ನೂ ಬಂಧಿಸಿದ್ದಾರೆ. ರಾಕ್ಷಸ ಪ್ರವೃತ್ತಿ ತೋರಿಸಿದ್ದಾರೆ. ನೇರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಇದನ್ನು ಮಾಡಿರುವುದು. ಸಿಎಂ ಬೊಮ್ಮಾಯಿ ಅವರನ್ನು ಖುಷಿ ಪಡಿಸಲಿಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ದೂರಿದರು.