ಬೆಂಗಳೂರು : ಏ.19 ರಂದು ನಡೆಯುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಮಗ್ರ ಉಸ್ತುವಾರಿಗಳನ್ನು ನೇಮಿಸಿ ಕಾಂಗ್ರೆಸ್ ಪಕ್ಷ ಆದೇಶ ಹೊರಡಿಸಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ ಮೇರೆಗೆ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ ಈ ಆದೇಶ ಹೊರಡಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಮೇ 19ಕ್ಕೆ ಉಪ ಚುನಾವಣೆ ನಡೆಯಲಿದೆ. ಸಚಿವ ಸಿ ಎಸ್ ಶಿವಳ್ಳಿ ಅಕಾಲಿಕ ಅಗಲಿಕೆಯಿಂದ ಕುಂದಗೋಳ ಕ್ಷೇತ್ರ ತೆರವಾಗಿತ್ತು. ಅದೇ ರೀತಿ ಡಾ. ಉಮೇಶ್ ಜಿ ಜಾಧವ್ ರಾಜೀನಾಮೆಯಿಂದ ಚಿಂಚೋಳಿ ಕ್ಷೇತ್ರ ತೆರವಾಗಿತ್ತು. ಈ ಎರಡು ಕ್ಷೇತ್ರವನ್ನು ಮತ್ತೆ ತಮ್ಮ ಬಳಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಇಂದು ಸಮಗ್ರ ಉಸ್ತುವಾರಿಗಳನ್ನು ನೇಮಿಸಿ ಕೆಪಿಸಿಸಿ ಆದೇಶ ಹೊರಡಿಸಿದೆ.
ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಮಗ್ರ ಉಸ್ತುವಾರಿಗಳ ನೇಮಕ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಅನುಕಂಪದ ಲಾಭದ ಜೊತೆಗೆ ವಿಶೇಷ ಕಾರ್ಯತಂತ್ರದ ಮೂಲಕ ಗೆಲ್ಲುವ ಯೋಜನೆಯನ್ನು ಕಾಂಗ್ರೆಸ್ ಮಾಡಿದ್ದು ಸಚಿವರಾದ ಆರ್ ವಿ ದೇಶಪಾಂಡೆ, ಡಿ ಕೆ ಶಿವಕುಮಾರ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ ಪಾಟೀಲ್ ಹಾಗೂ ಎಐಸಿಸಿ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಯಂ ಟಾಗೋರ್ ಅವರನ್ನು ನೇಮಿಸಿದೆ.
ಜಂಟಿ ಉಸ್ತುವಾರಿಗಳನ್ನಾಗಿ ಮಾಜಿ ಸಚಿವರಾದ ವಿನಯ್ ಕುಲಕರ್ಣಿ ಹಾಗೂ ಸಂತೋಷ್ ಲಾಡ್ ನೇಮಿಸಿದೆ. ಸಮನ್ವಯಕಾರರನ್ನಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಭಂಡಾರಿ, ಎಸ್.ಜಿ ನಂಜಯ್ಯನಮಠ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಗೌಡ ಪಾಟೀಲ್, ಧಾರವಾಡ ಜಿಲ್ಲೆ ಡಿಸಿಸಿ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಹಾಗೂ ಹುಬ್ಬಳ್ಳಿ- ಧಾರವಾಡ ನಗರ ಡಿಸಿಸಿ ಅಲ್ತಾಫ್ ಹಳ್ಳೂರು ಅವರನ್ನು ನೇಮಿಸಲಾಗಿದೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ಒಟ್ಟಾರೆ ಉಸ್ತುವಾರಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಕಂಡ್ರೆ, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ಸಚಿವ ಎಂ.ಬಿ ಪಾಟೀಲ್ ಹಾಗೂ ಎಐಸಿಸಿ ಕಲಬುರ್ಗಿ ವಿಭಾಗದ ಸಾಕೆ ಶೈಲಜನಾಥ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಅಜಯ್ ಸಿಂಗ್ ಮತ್ತು ಸಮನ್ವಯಕಾರರಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೈಲಾಶ್ ನಾಥ್ ಪಾಟೀಲ್, ಎ. ವಸಂತಕುಮಾರ್, ಕಲಬುರಗಿ ಜಿಲ್ಲೆ ಡಿಸಿಸಿ ಅಧ್ಯಕ್ಷ ಜಗದೇವ್ ಗುತ್ತೇದಾರ್, ಚಿಂಚೋಳಿ ಕೆಪಿಸಿಸಿ ಕಾರ್ಯದರ್ಶಿ ಇರ್ಷಾದ್ ಅಲಿ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.