ಕರ್ನಾಟಕ

karnataka

ETV Bharat / state

ಪೋಕ್ಸೋ ಕಾಯಿದೆಯನ್ನು ಯಾವುದೇ ವೈಯಕ್ತಿಕ ಕಾನೂನು ಅತಿಕ್ರಮಿಸುವುದಿಲ್ಲ: ಹೈಕೋರ್ಟ್ - ಪೋಕ್ಸೋ ಕಾಯಿದೆ

ವಿಶೇಷ ಕಾಯ್ದೆಯಾದ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯಾದ ಪೋಕ್ಸೋವನ್ನು ಯಾವುದೇ ವೈಯಕ್ತಿಕ ಕಾನೂನು ಅತಿಕ್ರಮಿಸುವುದಿಲ್ಲ ಎಂದು ಅಲೀಂ ಪಾಷಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿದೆ.

high court of karnataka
ಕರ್ನಾಟಕ ಹೈಕೋರ್ಟ್​

By

Published : Nov 1, 2022, 2:42 PM IST

ಬೆಂಗಳೂರು : ಮೊಹಮದೀಯ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬಿದರೆ ಪ್ರೌಢಾವಸ್ಥೆಗೆ ತಲಪುತ್ತಾರೆ ಹಾಗೂ 15 ವರ್ಷದ ನಂತರ ಮದುವೆ ಮಾಡಬಹುದು ಎಂಬ ವಾದವನ್ನು ಒಪ್ಪದ ನ್ಯಾಯಪೀಠ, ವಿಶೇಷ ಕಾಯ್ದೆಯಾದ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯಾದ ಪೋಕ್ಸೋವನ್ನು ಯಾವುದೇ ವೈಯಕ್ತಿಕ ಕಾನೂನು ಅತಿಕ್ರಮಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

17 ವರ್ಷದ ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿಯಾಗಿಸಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ಕೆ.ಆರ್.ಪುರದ ಅಲೀಂ ಪಾಷಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿರ್ಕ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ, ಆರೋಪಿ ಪರ ವಕೀಲರು, ಮೊಹಮದೀಯ ಕಾನೂನಿನಲ್ಲಿ ಪ್ರೌಢಾವಸ್ಥೆಯನ್ನು ಮದುವೆಗೆ ಪರಿಗಣಿಸಲಾಗುತ್ತದೆ. ಸಾಮಾನ್ಯ ಪ್ರೌಢಾವಸ್ಥೆಯ ವಯಸ್ಸು 15 ವರ್ಷ ಆಗಿದೆ. ಹಾಗಾಗಿ, ಈ ಪ್ರಕರಣದಲ್ಲಿ ಸಂತ್ರಸ್ತೆಗೆ ವಯಸ್ಸು 17 ವರ್ಷ ಆಗಿದೆ. ಅರ್ಜಿದಾರ ಆಕೆಯನ್ನು ಮದುವೆಯಾಗಿದ್ದಾನೆ. ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದ ಪರಿಣಾಮ ಸಂತ್ರಸ್ತೆಯ ಗರ್ಭೀಣಿಯಾಗಿದ್ದಾರೆ, ಆದ್ದರಿಂದ ಈ ಪ್ರಕರಣದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಸೆಕ್ಷನ್ 9 ಮತ್ತು 10 ಅನ್ವಯಿಸುವುದಿಲ್ಲ ಎಂದು ವಾದ ಮಂಡಿಸಿದರು.

ಇದನ್ನು ಒಪ್ಪದ ನ್ಯಾಯಪೀಠ, ಪೋಕ್ಸೋ ವಿಶೇಷ ಕಾಯ್ದೆಯಾಗಿದೆ. ಅದು ವೈಯಕ್ತಿಕ ಕಾನೂನನ್ನು ಅತಿಕ್ರಮಿಸುತ್ತದೆ. ಈ ಕಾಯ್ದೆಯ ಪ್ರಕಾರ ಲೈಂಗಿಕ ಚಟುವಟಿಕೆ ತೊಡಗಿಸಿಕೊಳ್ಳಲು ಬಾಲಕಿಗೆ 18 ವರ್ಷ ಆಗಿರಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ, ಹೀಗಿದ್ದರೂ ಪ್ರಕರಣದ ಸಂತ್ರಸ್ತೆಗೆ 17 ವರ್ಷವಾಗಿದ್ದು, ವಿವಾಹ ವಿಚಾರವನ್ನು ಅರ್ಥಮಾಡಿಕೊಳ್ಳಲು ಸಮರ್ಥಳಾಗಿದ್ದಾಳೆ. ಮದುವೆಗೆ ಆಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ಸಾಕ್ಷ್ಯವಿಲ್ಲ. ಅರ್ಜಿದಾರ ಈಗಾಗಲೇ ಸಂತ್ರಸ್ತೆಯ ಗಂಡ ಆಗಿದ್ದಾನೆ. ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಆತನೇ ವಿಚಾರಣಾ ನ್ಯಾಯಾಲಯಕ್ಕೆ ನೀಡಿದ್ದಾನೆ. ಹಾಗಾಗಿ, ಯಾವುದೇ ಸಾಕ್ಷ್ಯ ನಾಶಪಡಿಸುವಂತಹ ಸನ್ನಿವೇಶ ಉದ್ಭವಿಸುವುದಿಲ್ಲ. ಈಗಾಗಲೇ ಮದುವೆಯಾಗಿರುವುದರಿಂದ ಅರ್ಜಿದಾರನನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ಯಾವುದೇ ಅಡಚಣೆ ಇಲ್ಲ. ಸಂತ್ರಸ್ತೆಯು ಗರ್ಭೀಣಿಯಾಗಿದ್ದು, ಆಕೆಯನ್ನು ಅರ್ಜಿದಾರ ಆರೈಕೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿದೆ.

ಅರ್ಜಿದಾರ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್ ಒದಗಿಸಬೇಕು. ಅಷ್ಟೋ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯ ನಾಶ ಪಡಿಸಬಾರದು. ಪೂರ್ವಾನುಮತಿಯಿಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿಬಿಟ್ಟು ತೆರಳಬಾರದು. ಪ್ರಕರಣದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಆದೇಶಿಸಿದೆ.

ಇದನ್ನೂ ಓದಿ:ನಕಲಿ ಅಂಕಪಟ್ಟಿ ಸಲ್ಲಿಸಿ ಸಹಾಯಕ ಉಪನ್ಯಾಸಕರಾಗಿ ಆಯ್ಕೆ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ABOUT THE AUTHOR

...view details