ಕರ್ನಾಟಕ

karnataka

ETV Bharat / state

ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ನಾಳೆ ನಾವು ಕಲಾಪ ಬಹಿಷ್ಕರಿಸುತ್ತೇವೆ ಎಂದ ಸಿದ್ದರಾಮಯ್ಯ - ಕಲಾಪ ಬಹಿಷ್ಕಾರ ನಿರ್ಧಾರ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Dec 9, 2020, 7:23 PM IST

Updated : Dec 9, 2020, 10:08 PM IST

22:04 December 09

ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ

19:15 December 09

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಿದ್ದನ್ನು ಖಂಡಿಸಿ ನಾಳಿನ ಕಲಾಪವನ್ನು ಬಹಿಷ್ಕಾರ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆ ಉಲ್ಲಂಘಿಸಿ ಸಂವಿಧಾನ ವಿರೋಧಿಯಾಗಿ ಚರ್ಚೆಗೆ ಅವಕಾಶ ನೀಡದೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಿದ್ದನ್ನು ಖಂಡಿಸಿ ನಾಳಿನ ಕಲಾಪ ಬಹಿಷ್ಕಾರ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಲ್ ಮಂಡಿಸುವ ಯಾವ ನಿಯಮವನ್ನೂ ಪಾಲನೆ ಮಾಡಿಲ್ಲ. ಹಾಗಾಗಿ ನಾವು ನಾಳಿನ ಕಲಾಪ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದೇವೆ. ನಾಳೆ ನಡೆಯುವ ಎಲ್ಲಾ ಕಲಾಪದಿಂದ ನಾವು ದೂರ ಉಳಿಯಲಿದ್ದೇವೆ. ಹಳ್ಳಿಗಾಡಿನ‌ ಆರ್ಥಿಕ ವ್ಯವಸ್ಥೆ ಹಾಳು ಮಾಡುವ ಧೋರಣೆ ಖಂಡಿಸಿ ನಾಳೆ ಸದನ ಕಲಾಪ ಬಹಿಷ್ಕಾರ ಮಾಡಿದ್ದೇವೆ ಎಂದು ಪ್ರಕಟಿಸಿದರು. 

ಗ್ರಾಮ ಪಂಚಾಯತ್ ಚುನಾವಣೆ ವೇಳೆ ಈ ಬಿಲ್ ತಂದಿದ್ದಾರೆ. ಇದರ ಪರಿಣಾಮ ಏನಾಗಲಿದೆ? ಇದು ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ? ಹಾಗಾದರೆ ನೀತಿ‌ ಸಂಹಿತೆ ಏಕೆ ಬೇಕು? ನಾವು ಚುನಾವಣಾ ಆಯೋಗದ ಮೊರೆಗೂ ಹೋಗಲಿದ್ದೇವೆ ಎಂದರು. 

ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಸತ್ ಸಂಪ್ರದಾಯಗಳನ್ನು ಬಿಜೆಪಿ ಸರ್ಕಾರ ನಾಶ ಮಾಡಲು ಹೊರಟಿದೆ. 40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಈ ರೀತಿ ನಡೆದಿರಲಿಲ್ಲ. ನಿನ್ನೆ ನಮಗೆಲ್ಲಾ ಇವತ್ತಿನ ಅಜೆಂಡಾ ಕಳಿಸಿದ್ದಾರೆ. ಎಲ್ಲಿಯೂ ಗೋಹತ್ಯೆ ವಿಧೇಯಕದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಿನ್ನೆ ಬಿಎಸಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗಿಲ್ಲ. ಅಜೆಂಡಾದ ಶಾಸನ ರಚನೆ ಭಾಗದಲ್ಲಿ ಗೋಹತ್ಯೆ ವಿಧೇಯಕದ ಬಗ್ಗೆ ಉಲ್ಲೇಖವಿಲ್ಲ. ಇದ್ದಕ್ಕಿದ್ದಂತೆ ಅಚ್ಚರಿ ಆಗುವ ರೀತಿಯಲ್ಲಿ ಈ ಬಿಲ್ ಮಂಡಿಸಿದ್ದಾರೆ. ಪ್ರಭು ಚೌವ್ಹಾಣ್ ಬಳಿ ಬಿಲ್ ಇರಲಿಲ್ಲ, ನಮಗೂ ಬಿಲ್ ಪ್ರತಿ ಕೊಟ್ಟಿಲ್ಲ. ಸ್ಪೀಕರ್ ಕೇಳಿದರೂ ಬಿಲ್ ಇಲ್ಲ. ಕಾರ್ಯದರ್ಶಿ ಬಳಿಯೂ ಇಲ್ಲ. ಸರ್ಕಾರದ ಬಳಿಯೂ ಇಲ್ಲ. ಕಾಪಿಯೇ ಇಲ್ಲದೇ ಅಧಿಕಾರಿಗಳು ಬರೆದು ಕೊಟ್ಟಿದ್ದನ್ನು ಓದಿದ್ದಾರೆ. ಇದು ಪದ್ಧತಿಯಲ್ಲ. ಬಿಲ್ ಮಂಡಿಸುವ ಮೊದಲು ಸದಸ್ಯರ ಗಮನಕ್ಕೆ ತರಬೇಕು. ಚರ್ಚೆ ಮಾಡಲು ಅವಕಾಶ ಇರಬೇಕು. ಬಿಲ್ ಪ್ರತಿ ಕೊಡಬೇಕು. ಬಿಎಸಿ ಸಭೆಯಲ್ಲಿ ಇದು ಬಂದಿರಲಿಲ್ಲ ಎಂದರೆ ಸ್ಪೀಕರ್ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿದರು. 

ಒಂದು ಹಸು ತಂದು ಇಲ್ಲಿ ಪೂಜೆ ಮಾಡಿದ್ದಾರೆ. ಎಲ್ಲರೂ ಕೇಸರಿ ಶಾಲು ಧರಿಸಿ ಬಂದು ಸದನದಲ್ಲಿ ಕುಳಿತಿದ್ದರು. ಇಡೀ ವಿಧಾನಸಭೆಯನ್ನು ಕೇಸರಿಮಯ ಮಾಡಿದರು. ಇದು ಅವರ ಉದ್ದೇಶ ಏನು ಎನ್ನುವುದನ್ನು ತೋರಿಸುತ್ತದೆ. ಜಾನುವಾರು ರಕ್ಷಣೆ ಹೆಸರಿನಲ್ಲಿ ಹಳ್ಳಿಗಾಡುಗಳ ಆರ್ಥಿಕ ವ್ಯವಸ್ಥೆ ನಾಶಪಡಿಸಲು ಹೊರಟಿದ್ದಾರೆ ಎಂದು ಟೀಕಿಸಿದರು. 

ಈಗಾಗಲೇ ಗೋಹತ್ಯೆ ತಡೆಗೆ ಕಾನೂನು ಇದೆ. ಗೊಡ್ಡು ಹಸು, ವಯಸ್ಸಾದ ಹಸು ಇರುವ ಬಡ ರೈತ, ಸಣ್ಣ ರೈತ ಹೇಗೆ ಸಾಕುತ್ತಾನೆ. ಗೋಶಾಲೆ ಮಾಡುತ್ತೇವೆ, ಅಲ್ಲಿಗೆ ತನ್ನಿ ಎನ್ನುತ್ತಿದ್ದಾರೆ. ಈ ಕಾನೂನಿನಿಂದ ಲಕ್ಷಾಂತರ ರಾಸುಗಳನ್ನು ಎಲ್ಲಿ ಸಾಕಲು ಸಾಧ್ಯ? ಯಾವ ಗೋಶಾಲೆಯಲ್ಲಿ ಸಾಕಲು ಸಾಧ್ಯ? ಕಡೆಗೆ ಕಷ್ಟಕ್ಕೆ ಸಿಲುಕುವವರು ರೈತರು. ರೈತರಿಗೂ ವ್ಯವಸಾಯಕ್ಕೂ ಸಂಬಂಧ ಇದೆ. ರೈತರಿಗೂ ರಾಸುಗಳಿಗೂ ಸಂಬಂಧ ಇದೆ. ಇದನ್ನ ಯಾರನ್ನೋ ಮನಸ್ಸಿನಲ್ಲಿ ಇರಿಸಿಕೊಂಡು ಸಮಾಜವನ್ನು ಒಡೆಯಲು, ಮತಗಳ ವಿಭಜನೆ ಮಾಡಲು ದುರುದ್ದೇಶದಿಂದ ಈ ಕಾಯ್ದೆ ತರಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಇದನ್ನು ಓದಿ:ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ!

ಬಹುಮತ ಇದೆ ಎಂದು ಬುಲ್ ಡೌನ್ ಮಾಡಲು ಹೊರಟಿದ್ದಾರೆ. ವಿಧಾನಸಭೆ ಇರುವುದು ಏಕೆ? ಜನ ಮತ ಹಾಕಿ ಕಳಿಸಿರುವುದು ಜನರ ಪರ ಕೆಲಸ ಮಾಡಲು, ಕಾಯ್ದೆ ತರಲು, ಸಮಾಜ ಪರಿವರ್ತನೆ ಮಾಡುವುದಕ್ಕೆ ಹೊರತು ಸಮಾಜ ಒಡೆಯಲು ಅಲ್ಲ. ಇಂದು ನಾನು ಬಹಳ ಮನವಿ ಮಾಡಿದೆ. ಬಿಲ್ ತನ್ನಿ‌ ಚರ್ಚೆಗೆ ಸಿದ್ಧರಿದ್ದೇವೆ. ಕೂಲಂಕಷವಾಗಿ ಚರ್ಚೆ ಮಾಡೋಣ. ಜನವರಿಯಲ್ಲಿ ಅಧಿವೇಶನ ನಡೆಯಲಿದೆ, ತನ್ನಿ ಎಂದೆವು. ಆದರೂ ಕೇಳಲಿಲ್ಲ ಎಂದರು. 

ಸ್ಪೀಕರ್ ಕಚೇರಿಯನ್ನ ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ಸ್ಪೀಕರ್​ಗೆ ಸ್ವತಂತ್ರ ಕೊಡದೆ ಕೈಗೊಂಬೆ ಮಾಡುಕೊಂಡಿದ್ದಾರೆ. ಬಿಲ್ ಮಂಡಿಸಿದ ನಂತರವೂ ಇಂದು ಚರ್ಚೆ ಕಷ್ಟ, ನಾಳೆ ಮಾಡೋಣ ಎಂದೆ. ಸಿಎಂ, ಕಾನೂನು ಸಚಿವ, ಸ್ಪೀಕರ್ ನಮ್ಮ‌ ಮನವಿಯನ್ನು ಕಿವಿಗೆ ಹಾಕಿಕೊಳ್ಳಲು ತಯಾರಿಲ್ಲ. ಇದನ್ನು ಪ್ರಜಾಪ್ರಭುತ್ವ ಎಂದು ಕರೆಯಬೇಕಾ? ಸದನದ ಬಗ್ಗೆ ಮೂರು ಕಾಸಿನ ಗೌರವವಿದೆಯಾ? ಪ್ರತಿಪಕ್ಷ ನಾಯಕ ಎಂದರೆ ಶ್ಯಾಡೋ ಸಿಎಂ ಎಂದು ಕರೆಯುತ್ತಾರೆ. ಆದರೆ ನಮ್ಮ ಯಾವ ಮನವಿಗೂ ಸ್ಪಂದನೆ ಸಿಗಲಿಲ್ಲ. ಅಂತಿಮವಾಗಿ ಕಾನೂನು ಸಚಿವ ಮಾಧುಸ್ವಾಮಿ ಕೂಡ ನಾಳೆ ಚರ್ಚೆಗೆ ತೆಗೆದುಕೊಳ್ಳಲು ಹೇಳಿದರಾದರೂ ಉಳಿದ ಸಚಿವರು ಒಪ್ಪಲಿಲ್ಲ. ಎಲ್ಲರೂ ಈಗಲೇ ಆಗಲಿ ಎಂದು ಆಗ್ರಹಿಸಿದರು. ಈ ರೀತಿ ಬಿಲ್ ಮಂಡಿಸಿದ್ದನ್ನು ನಾನು ನೋಡಿಯೇ ಇಲ್ಲ ಎಂದು ಟೀಕಿಸಿದರು. 

ಸ್ಪೀಕರ್ ನಡೆಗೆ ಸಿದ್ದರಾಮಯ್ಯ ಆಕ್ಷೇಪ:

ನಾವು ಇನ್ನು ಮುಂದೆ ಸದನವನ್ನು ಬಹಿಷ್ಕಾರ ಮಾಡುತ್ತೇವೆ. ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ವಿಧೇಯಕ ಮಂಡಿಸಲು ಅವಕಾಶ ಕೊಟ್ಟಿದ್ದೀರಿ, ನೀವು ಅವರು ಹೇಳಿದಂತೆ ನಡೆದುಕೊಳ್ಳುತ್ತಿದ್ದೀರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಸ್ಪೀಕರ್ ಬಳಿ ತಮ್ಮ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ, ನಾವು ಯಾರ ಬಳಿ ರಕ್ಷಣೆ ಕೇಳಬೇಕು. ನಾವು ಇನ್ನು ಮುಂದೆ ಸದನವನ್ನೇ ಬಹಿಷ್ಕರಿಸುತ್ತೇವೆ. ನಾವು ಜನರ ಬಳಿ ಹೋಗುತ್ತೇವೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇವರು ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ ಎಂದು ಜನರ ಮುಂದೆ ಹೇಳುತ್ತೇವೆ. ಜನತಾ ನ್ಯಾಯಾಲಯದ ಮುಂದೆ ಹೋಗಿ ಮಾತನಾಡುತ್ತೇವೆ. ನಾವು ಇನ್ನು ಮುಂದೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ. ನಾಳೆಯೂ ಪಾಲ್ಗೊಳ್ಳುವುದಿಲ್ಲ. ಅವರೇ ಅಧಿವೇಶನ ನಡೆಸಲಿ ಎಂದು ಹೇಳಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ, ನಾನು ಬಿಎಸಿ ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಸದನದ ಗಮನಕ್ಕೆ ತಂದಿದ್ದೇನೆ. ನಾವು ಸಾಕಷ್ಟು ವಿಷಯಗಳ ಮೇಲೆ ಚರ್ಚೆಗೆ ಅವಕಾಶ ನೀಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಬೇಧಗಳು ಇರುತ್ತವೆ. ಆದರೆ, ಸದನ ಬಹಿಷ್ಕರಿಸುತ್ತೇವೆ ಎಂದು ಹೇಳುವುದು ಶೋಭೆ ತರುವುದಲ್ಲ. ಪ್ರತಿಪಕ್ಷದ ನಾಯಕರು ಸದನ ಬಹಿಷ್ಕರಿಸುವ ನಿರ್ಧಾರವನ್ನು ವಾಪಸ್ ಪಡೆದು ಸದನಕ್ಕೆ ಹಾಜರಾಗಬೇಕು. ಪ್ರತಿಪಕ್ಷದ ನಾಯಕರು ಗುರುವಾರದ ಕಲಾಪಕ್ಕೆ ಹಾಜರಾಗುವ ವಿಶ್ವಾಸ ಇದೆ ಎಂದರು

Last Updated : Dec 9, 2020, 10:08 PM IST

ABOUT THE AUTHOR

...view details