ಬೆಂಗಳೂರು: ಅಕ್ಟೋಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಹಣದ ಬದಲು 10 ಕೆ ಜಿ ಅಕ್ಕಿ ನೀಡಲಾಗುವುದು. ಟೆಂಡರ್ ಪ್ರಕ್ರಿಯೆ ಸಂಬಂಧಿಸಿದಂತೆ ಮಾತುಕತೆ ಅಂತಿಮ ಹಂತದಲ್ಲಿದ್ದು,ಶೀಘ್ರವೇ ಫಲಾನುಭವಿಗಳಿಗೆ 10 ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ, ಅಕ್ಕಿ ಕೊರತೆ ಎದುರಾದ ಹಿನ್ನೆಲೆ ಐದು ಕೆಜಿ ಅಕ್ಕಿ ಬದಲಾಗಿ ಪ್ರತಿಯೊಬ್ಬರಿಗೆ ಪ್ರತಿ ತಿಂಗಳು 170 ರೂ ಹಣ ವಿತರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಫಲಾನುಭವಿಗಳ ಅಕೌಂಟಿಗೆ 170 ರೂ ಹಣವನ್ನು ಸಂದಾಯ ಮಾಡಲಾಗಿತ್ತು.
ಮುಂದಿನ ತಿಂಗಳಿನಿಂದ ಹಣದ ಬದಲಾಗಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಹತ್ತು ಕೆ ಜಿ ಅಕ್ಕಿಯನ್ನು ಬರ ಪೀಡಿತ ತಾಲೂಕುಗಳಲ್ಲಿ ವಿತರಿಸಲು ನಿರ್ಧಾರ ಮಾಡಲಾಗಿದೆ. ಬರ ಸನ್ನಿವೇಶ ಇದ್ದರೂ ಮುಂದೆ ಮಳೆಯಾಗುವ ಸಾಧ್ಯತೆ ಇದೆ. ಕೃಷಿ ಸುಧಾರಿಸುವ ನಿರೀಕ್ಷೆ ಇದೆ. ರಾಜ್ಯದ ಜನರು ಆತಂಕ ಪಡಬೇಕಿಲ್ಲ ಸರ್ಕಾರ ನಿಮ್ಮ ಜತೆಗೆ ಇದೆ ಎಂದು ಭರವಸೆ ನೀಡಿದರು.
ಶಾಮನೂರುವರಿಗೂ ಸಿಎಂ ಆಗುವ ಆರ್ಹತೆಯಿದೆ: ಐದು ವರ್ಷವೂ ನಮ್ಮ ಸರ್ಕಾರವೇ ಇರಲಿದೆ. ಶಾಮನೂರು ಶಿವಶಂಕರಪ್ಪ ಅವರೂ ಸೇರಿದಂತೆ 224 ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ. ಶಾಮನೂರು ಅವರನ್ನು ಒಳಗೊಂಡಂತೆ ಎಲ್ಲರೂ ಸಹಮತದಿಂದ ಈಗಿನ ಸಿಎಂ ಆಯ್ಕೆ ಮಾಡಿದ್ದಾರೆ. ನಮ್ಮಲ್ಲಿ ಏನೇ ಬದಲಾವಣೆಗಳಿದ್ದರೂ ಬೇಡಿಕೆಗಳಿದ್ದರೂ ಅದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಎಲ್ಲರಿಗೂ ಮಾತನಾಡುವ ಹಾಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಕೆ ಎಚ್ ಮುನಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಸಮಿತಿ ಕೊಠಡಿಯಲ್ಲಿ ನೀರಾವರಿ ಯೋಜನೆಗಳ ಕುರಿತು ಸಣ್ಣ ನೀರಾವರಿ ಸಚಿವ ಬೋಸರಾಜು ಹಾಗೂ ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ನೆಲಮಂಗಲ ಶಾಸಕ ಶ್ರೀನಿವಾಸ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂಓದಿ:ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಮತ್ತೊಂದು ಸಂಕಷ್ಟ: ಬಿ ರಿಪೋರ್ಟ್ ಮತ್ತೊಮ್ಮೆ ತನಿಖೆ ನಡೆಸುವಂತೆ ಕೋರ್ಟ್ ಆದೇಶ