ಬೆಂಗಳೂರು: ಬಜೆಟ್ನಲ್ಲಿ ಅಂಗನವಾಡಿ ನೌಕರರಿಗೆ ಆಗಿರುವ ಸೇವಾ ಜೇಷ್ಠತೆಯ ಆಧಾರದಲ್ಲಿ ಅತ್ಯಲ್ಪ ಗೌರವಧನ ಹೆಚ್ಚಳಕ್ಕೆ ತೀವ್ರ ಬೇಸರ ವ್ಯಕ್ತವಾಗಿದೆ. ಪೂರ್ಣ ಪ್ರಮಾಣದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಎಸ್. ವರಲಕ್ಷ್ಮಿ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 339 ಕೋಟಿ ಶಿಫಾರಸು ಮಾಡಲಾಗಿತ್ತು. ಅದರಂತೆ 20 ವರ್ಷ ಸೇವಾವಧಿ ಮೇಲ್ಪಟ್ಟವರಿಗೆ 2 ಸಾವಿರ ರೂ, ಸಹಾಯಕಿ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಗೆ ತಲಾ 1700 ರೂ. ನೀಡಲು ಇಲಾಖೆ ತಿಳಿಸತ್ತು. ಆದರೆ ಈಗ ಘೋಷಣೆಯಾಗಿರುವುದು ಕೇವಲ ಅತ್ಯಲ್ಪ ಎಂದು ಕಿಡಿಕಾರಿದರು.
ಮೊಟ್ಟೆಯ ಹಣವನ್ನು ಮುಂಗಡವಾಗಿ ಇಲಾಖೆಯಿಂದಲೇ ಸರಬರಾಜು ಮಾಡಬೇಕಿತ್ತು. ಪ್ರತಿಯೊಬ್ಬ ಕಾರ್ಯಕರ್ತೆ ತಮ್ಮ ಕೈಯಿಂದಲೇ ಮೂರ್ನಾಲ್ಕು ಸಾವಿರ ರೂ. ಹಣ ಹಾಕಿ ಮೊಟ್ಟೆ ಖರೀದಿಸಿ ನೀಡುತ್ತಿದ್ದರು. ಸಕಾಲದಲ್ಲಿ ಹಣ ಬಿಡುಗಡೆ ಯಾಗದೆ ಹಾಗೂ ಗೌರವಧನವೂ ಸೂಕ್ತಕಾಲದಲ್ಲಿ ನೀಡದೆ ಸಂಕಷ್ಟ ಒದಗಿದೆ. ಸ್ಥಳೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆ ದರ ನೀಡದೆ ಇರುವುದರಿಂದ ಸಾವಿರಾರು ರೂ. ಕಳೆದುಕೊಳ್ಳುವ ಪರಿಸ್ಥಿತಿ ಕಳೆದ ಹಲವು ವರ್ಷಗಳಿಂದ ಉದ್ಭವವಾಗಿದೆ. ಈ ಸಮಸ್ಯೆ ಕೂಡಲೇ ಇತ್ಯರ್ಥ ಪಡಿಸಬೇಕು ಎಂದು ಆಗ್ರಹಿಸಿದರು.