ಬೆಂಗಳೂರು:ಗುರುವಾರ ಸಂಜೆ ರಾಜ್ಯ ಬಿಜೆಪಿಯ ಮಹತ್ವದ ಕೋರ್ ಕಮಿಟಿ ಸಭೆ ನಡೆಯಲಿದೆ. ಭಾರತೀಯ ಜನತಾ ಪಕ್ಷದ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಹೈ ವೋಲ್ಟೇಜ್ ಕೋರ್ ಕಮಿಟಿ ಸಭೆ ನಡೆಯಲಿದೆ. ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆ ತರುವ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ನಾಳೆ ಸಂಜೆ 7 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಅಮಿತ್ ಶಾ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರು, ಕೋರ್ ಕಮಿಟಿ ಸದಸ್ಯರು ಭಾಗವಹಿಸಲಿದ್ದಾರೆ. ಸದ್ಯದಲ್ಲೇ ಎದುರಾಗಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮುಂಬರಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವ ಹಿನ್ನೆಲೆ ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ.
ಇದನ್ನೂ ಓದಿ:ಸಂಘರ್ಷದ ವಾತಾವರಣದಲ್ಲಿಯೂ ಶಾಂತಿ - ಸುವ್ಯವಸ್ಥೆ ಕಾಪಾಡಿದ್ದೇವೆ: ಸಿಎಂ ಬೊಮ್ಮಾಯಿ
ಯಾವ ಕಾರಣಕ್ಕೂ ಮುಂದಿನ ಯಾವ ಚುನಾವಣೆಗಳಲ್ಲಿಯೂ ಬಿಜೆಪಿಗೆ ಹಿನ್ನಡೆ ಆಗಬಾರದು ಎನ್ನುವ ಕಾರಣಕ್ಕೆ ಸಂಘಟನಾತ್ಮಕ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಗುತ್ತದೆ. ಬಿಬಿಎಂಪಿ ಚುನಾವಣೆ ವಿಷಯದಲ್ಲಿಯೂ ಚರ್ಚೆ ನಡೆಸಲಾಗುತ್ತದೆ ಎನ್ನಲಾಗ್ತಿದೆ.ಮುಖ್ಯವಾಗಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇರುವಂತೆ ನೋಡಿಕೊಳ್ಳುವ ಕುರಿತು ಚರ್ಚಿಸಲಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು, ಜನರಲ್ಲಿ ಜಾಗೃತಿ ಮೂಡಿಸಿ ಬಿಜೆಪಿ ಪರ ಒಲವು ಮೂಡುವಂತೆ ನೋಡಿಕೊಳ್ಳುವ ಟಾಸ್ಕ್ ಅನ್ನು ಬಿಜೆಪಿ ನಾಯಕರಿಗೆ ನೀಡಲಾಗುತ್ತದೆ ಎಂಬ ಮಾಹಿತಿ ಇದೆ.
ಸಂಪುಟ ಚರ್ಚೆ:ಪದೇ ಪದೇ ಮುಂದೂಡಿಕೆಯಾಗುತ್ತಲೇ ಬರುತ್ತಿರುವ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ವಿಚಾರದ ಕುರಿತು ಮಹತ್ವದ ಮಾತುಕತೆ ಕೋರ್ ಕಮಿಟಿ ಸಭೆಯಲ್ಲಿ ನಡೆಯಲಿದೆ. ಈಗಾಗಲೇ ದೆಹಲಿ ಮಟ್ಟದಲ್ಲಿ ಸಿಎಂ ಮಾತುಕತೆ ನಡೆಸಿದ್ದು, ಸಂಭಾವ್ಯ ಪಟ್ಟಿ ಕೂಡ ಕಳುಹಿಸಿಕೊಟ್ಟಿದ್ದರು. ಸಂಘ ಪರಿವಾರದ ಹಿನ್ನೆಲೆಯವರಿಗೆ, ಪಕ್ಷ ನಿಷ್ಟರಿಗೆ, ಯುವಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು, ಕೆಲ ಹಿರಿಯರನ್ನು ಸಂಘಟನೆಗೆ ಬಳಸಿಕೊಳ್ಳಬೇಕು ಎನ್ನುವ ಚಿಂತನೆ ಒಳಗೊಂಡು ಚುನಾವಣಾ ಕ್ಯಾಬಿನೆಟ್ ರಚನೆ ಮಾಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ನಿಗಮ-ಮಂಡಳಿ ನೇಮಕ: ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ನೇಮಕಾತಿ ಬಾಕಿ ಉಳಿದಿದೆ. ಪಕ್ಷಕ್ಕೆ ಚುನಾವಣೆ ವೇಳೆ ಅನುಕೂಲಕರ ವಾತಾವರಣ ಸೃಷ್ಟಿಗೆ ಪೂರಕವಾಗಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಕುರಿತು ಚರ್ಚಿಸಲಾಗುತ್ತದೆ. ಈಗಾಗಲೇ ನಿಗಮ ಮಂಡಳಿಗಳ ನೇಮಕಾತಿಗೆ ಪಟ್ಟಿ ರಾಜ್ಯ ಮಟ್ಟದಲ್ಲಿ ಅಂತಿಮಗೊಂಡಿದೆ. ಕಟೀಲ್ ನೇತೃತ್ವದಲ್ಲಿ ಸಭೆಯಾಗಿ, ಸಿಎಂ ನೇತೃತ್ವದಲ್ಲಿ ಸಭೆಯಾಗಿ ನಂತರ ಕಟೀಲ್, ಸಿಎಂ ಇಬ್ಬರೂ ಕುಳಿತು ಮಾತುಕತೆ ನಡೆಸಿ ಪ್ರತ್ಯೇಕ ಪಟ್ಟಿಯನ್ನು ತಯಾರಿಸಲಾಗಿದೆ. ಈ ಕುರಿತು ನಾಳಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಡ್ಯಾಮೇಜ್ ಕಂಟ್ರೋಲ್: ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗುವಂತಹ ಯಾವುದೇ ಕೆಲಸ ಮಾಡದಂತೆ ಖಡಕ್ ಸೂಚನೆ ನೀಡಲಾಗುತ್ತದೆ. ಚುನಾವಣೆಯಲ್ಲಿ ನಕಾರಾತ್ಮಕ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಸಲಹೆ ನೀಡಲಾಗುತ್ತದೆ.
ಒಗ್ಗಟ್ಟಿನ ಪ್ರವಾಸ:ಪಕ್ಷದ ನಾಯಕತ್ವದಲ್ಲಿ ಒಗ್ಗಟ್ಟಿನ ಮಂತ್ರ ಬೋಧಿಸಲಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿಯೂ ರಾಜ್ಯ ಪ್ರವಾಸ ಮಾಡಬೇಕು, ಯಡಿಯೂರಪ್ಪ ಅನುಭವದ ಪ್ರಯೋಜನೆ ಪಡೆದುಕೊಳ್ಳಬೇಕು, ಅವರ ರಾಜ್ಯ ಪ್ರವಾಸಕ್ಕೆ ಪಕ್ಷ, ಸರ್ಕಾರ ಅಗತ್ಯ ಸಹಕಾರ ನೀಡಬೇಕು ಎಂಬ ಅಂಶದ ಕುರಿತು ಚರ್ಚೆಯಾಗಲಿದೆ. ಪದೇ ಪದೇ ಮುಂದೂಡಿಕೆಯಾಗಿದ್ದ ಬಿಎಸ್ವೈ ರಾಜ್ಯ ಪ್ರವಾಸಕ್ಕೂ ಅಂತಿಮ ಒಪ್ಪಿಗೆ ನಾಳಿನ ಸಭೆಯಲ್ಲಿ ಸಿಗಲಿದೆ.
ಅಜೆಂಡಾ ಸೆಟ್: ಮುಂಬರಲಿರುವ ಚುನಾವಣೆಗೆ ಅಮಿತ್ ಶಾ ಅಜೆಂಡಾ ಸೆಟ್ ಮಾಡಲಿದ್ದಾರೆ ಎನ್ನಲಾಗ್ತಿದೆ. ಯಾವ ರೀತಿ ಪ್ರಚಾರ ಕಾರ್ಯ ನಡೆಸಬೇಕು, ಯಾವೆಲ್ಲಾ ವಿಷಯಗಳನ್ನು ಜನರ ಮುಂದಿಡಬೇಕು. ಸದ್ಯ ಹಿಜಾಬ್ ವಿವಾದ, ದೇವಾಲಯ, ಜಾತ್ರೆಗಳಲ್ಲಿ ಹಿಂದೂಯೇತರರ ವ್ಯಾಪಾರ ನಿರ್ಬಂಧ, ಹಲಾಲ್ ಕಟ್ ನಂತರ ವಿವಾದಗಳಿದ್ದು, ಇದರಲ್ಲಿ ಬಿಜೆಪಿ ಯಾವ ರೀತಿ ಮುಂದುವರೆಯಬೇಕು, ಯಾವೆಲ್ಲಾ ಅಂಶಗಳನ್ನು ಪ್ರಚಾರ ಕಾರ್ಯಕ್ಕೆ ಹೆಚ್ಚಾಗಿ ಬಳಸಿಕೊಳ್ಳಬೇಕು ಎನ್ನುವ ಕುರಿತು ಸಮಾಲೋಚನೆ ನಡೆಯಲಿದ್ದು, ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ.
ಚುನಾವಣೆಗೆ ಸಿದ್ಧರಾಗುವಂತೆ ಸೂಚನೆ:ಯಾವಾಗ ಚುನಾವಣೆ ನಡೆದರೂ ಅದಕ್ಕೆ ಸಿದ್ಧವಾಗಿರಬೇಕು ಎಂದು ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ. ಒನ್ ನೇಷನ್ ಒನ್ ಎಲೆಕ್ಷನ್ ಚಿಂತನೆ ಪರ ಇರುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಒಟ್ಟಿಗೆ ಹಲವು ರಾಜ್ಯಗಳ ಚುನಾವಣೆ ನಡೆಸಬೇಕು ಎನ್ನುವುದು ಬಿಜೆಪಿ ಅಜೆಂಡಾವಾಗಿದೆ. ಹೀಗಾಗಿ ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ಚುನಾವಣೆ ಜೊತೆಗೆ ರಾಜ್ಯದಲ್ಲಿಯೂ ಚುನಾವಣೆ ನಡೆಸುವ ಆಲೋಚನೆ ಇದ್ದು, ಆಂತರಿಕ ಸಮೀಕ್ಷಾ ವರದಿ ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಪಕ್ಷಕ್ಕೆ ಪೂರಕ ವಾತಾವರಣ ಇದೆ ಅನ್ನಿಸಿದಲ್ಲಿ ಗುಜರಾತ್ ಜೊತೆಯಲ್ಲೇ ಚುನಾವಣೆಗೆ ಹೋಗಲು ಹೈಕಮಾಂಡ್ ಸೂಚನೆ ನೀಡಲಿದ್ದು, ಈ ಸಂಬಂಧ ಅಗತ್ಯ ಮಾಹಿತಿ ನೀಡಿ ಸಿದ್ಧತೆಗೂ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.
ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಇಲ್ಲ: ಈ ಬಾರಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡದೆ ಚುನಾವಣೆಗೆ ಹೋಗಲಾಗುತ್ತದೆ. ಹಾಗಾಗಿ ಸಾಮೂಹಿಕ ನಾಯಕತ್ವ ಯಡಿಯೂರಪ್ಪ ಮಾರ್ಗದರ್ಶನದ ಮೂಲಕ ಚುನಾವಣೆಗೆ ಅಣಿಯಾಗುವಂತೆ ಸಂದೇಶ ನೀಡಲಾಗುತ್ತದೆ ಎನ್ನಲಾಗ್ತಿದೆ.
ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ:ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ನಾಲ್ಕೈದು ಹೆಸರುಗಳು ನೂತನ ಮುಖ್ಯಮಂತ್ರಿ ಸ್ಥಾನದ ರೇಸ್ನಲ್ಲಿರುವ ಕುರಿತು ವದಂತಿ ಹರಿದಾಡುತ್ತಿದೆ. ಇದು ಬಿಜೆಪಿ ನಾಯಕರಲ್ಲೇ ಗೊಂದಲ ಸೃಷ್ಟಿಸಿದೆ. ಕಾರ್ಯಕರ್ತರನ್ನೂ ಗೊಂದಲಕ್ಕೆ ಸಿಲುಕಿಸಿದೆ. ಇದರ ಜೊತೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬದಲಾವಣೆ ಚರ್ಚೆ ಕೂಡ ನಡೆಯುತ್ತಿದೆ. ಮೂರು ವರ್ಷದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಈ ಚರ್ಚೆ ನಡೆದಿದ್ದು, ಪಕ್ಷ ಹಾಗೂ ಸರ್ಕಾರದ ನಾಯಕತ್ವ ಬದಲಾವಣೆ ಗೊಂದಲಕ್ಕೆ ಕೋರ್ ಕಮಿಟಿ ಸಭೆಯಲ್ಲಿ ತೆರೆ ಎಳೆಯಲಾಗುತ್ತದೆ ಎನ್ನಲಾಗ್ತಿದೆ.