ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಗೆ ಕೆಲವು ಲೇಔಟ್‌ಗಳನ್ನು ಹಸ್ತಾಂತರಿಸಲು ಮುಂದಾಗಿದೆ. ದಶಕಗಳ ಹೋರಾಟದ ನಂತರ ಅಂತಿಮವಾಗಿ ಸೈಟ್ ಮಾಲೀಕರಿಗೆ ಸಮಾಧಾನಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿದ ಲೇಔಟ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಡಿ ಇಟ್ಟಿದೆ. ಅಂಜನಾಪುರ ಮತ್ತು ಜೆ.ಪಿ.ನಗರದಲ್ಲಿ ಒಳಚರಂಡಿ ವ್ಯವಸ್ಥೆ, ನೀರು ಸರಬರಾಜು, ವಿದ್ಯುತ್, ಸಂಪರ್ಕ ರಸ್ತೆ ಕಲ್ಪಿಸುವ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಇತರ ಬಡಾವಣೆಗಳಲ್ಲೂ ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್ ಕರೆಯಲಾಗಿದೆ. ವಿಶ್ವೇಶ್ವರಯ್ಯ ಮತ್ತು ಬನಶಂಕರಿ ಬಡಾವಣೆಗಳಲ್ಲಿ ಕಾಮಗಾರಿ ಆರಂಭಿಸಲು ಕೂಡ ತಯಾರಿ ನಡೆಯುತ್ತಿದೆ.
ಬಡಾವಣೆಗಳ ನಿವಾಸಿಗಳು ಸುಮಾರು ಒಂದು ದಶಕದಿಂದ ಕಾದು ಕುಳಿತಿದ್ದು, ಕಾಮಗಾರಿ ನಡೆಯುತ್ತಿರುವ ವೇಗದಿಂದ ನಿರಾಶೆಗೊಂಡಿದ್ದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜೊತೆಗೆ ನೀರು ಸರಬರಾಜು ಮತ್ತು ಯುಜಿಡಿ ಸಂಪರ್ಕಗಳನ್ನು ಒದಗಿಸುವ ಕೆಲಸವನ್ನು ಪ್ರಾರಂಭಿಸಲು ನಾವು ಚರ್ಚೆ ನಡೆಸಿದ್ದೇವೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿವೇಶನ ಮಂಜೂರು ಮಾಡಿ 17 ವರ್ಷ:ನಿವೇಶನ ಮಂಜೂರು ಮಾಡಿ 17 ವರ್ಷಗಳಾಗಿದ್ದು, ಇಂದಿಗೂ ನಮಗೆ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್ ಪೂರೈಕೆ ಇಲ್ಲ. ಇಂತಹ ಮೂಲಭೂತ ವಿಷಯಗಳಿಗೆ ಬಿಡಿಎಯನ್ನು ಏಕೆ ಇಲ್ಲಿ ಮಧ್ಯೆ ತರಬೇಕು ಎಂದು ನನಗೆ ಆಶ್ಚರ್ಯವಾಗಿದೆ ಎಂದು ಅಂಜನಾಪುರ ಲೇಔಟ್‌ನ ನಿವೇಶನ ಮಾಲೀಕರುಗಳು ಹೇಳಿದ್ದಾರೆ.
ಕನಿಷ್ಠ ಮೂಲ ಸೌಕರ್ಯಗಳನ್ನು ಶೀಘ್ರ ಒದಗಿಸಿ:ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾದ ಬಿಡಿಎ ಸ್ವಯಂಪ್ರೇರಿತವಾಗಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ಈ ಬಡಾವಣೆಗಳಲ್ಲಿ ಜನರಿಗೆ ಮನೆ ನಿರ್ಮಿಸಿಕೊಳ್ಳಲು ಕನಿಷ್ಠ ಮೂಲ ಸೌಕರ್ಯಗಳನ್ನು ಶೀಘ್ರ ಒದಗಿಸಬೇಕು ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಹಿಂದೆ ಓಡಾಡ ಬೇಕಾದ ಪರಿಸ್ಥಿತಿ:ವಿಶ್ವೇಶ್ವರಯ್ಯ ಲೇಔಟ್‌ನಿಂದ ನಿವೇಶನ ಮಂಜೂರಾದ ಮತ್ತೊಬ್ಬರು ಮಾಲೀಕರು ಮಾತನಾಡಿ, ಪ್ರತಿ ಮೂಲಭೂತ ಕೆಲಸಕ್ಕೂ ನಿವಾಸಿಗಳು ಅಧಿಕಾರಿಗಳ ಹಿಂದೆ ಓಡಬೇಕಾಗಿದೆ ಎಂದು ಅಳಲನ್ನು ತೋಡಿಕೊಂಡರು.
ಮೂಲ ಸೌಕರ್ಯಗಳನ್ನು ಒದಗಿಸುವ ಕಷ್ಟ:ರಾಜಕೀಯ ಕಾರಣಗಳಿಂದಾಗಿ ಅಧಿಕಾರಿಗಳು ಲೇಔಟ್ ರಚನೆಯನ್ನು ಘೋಷಿಸಿದ ನಿದರ್ಶನಗಳಿವೆ. ಆದಾಗ್ಯೂ, ಭೂಸ್ವಾಧೀನ ಪೂರ್ಣಗೊಳ್ಳುವುದಿಲ್ಲ ಮತ್ತು ಕೆಲವು ಭಾಗಗಳಲ್ಲಿ ಮಾಡಲಾಗುತ್ತದೆ. ಸಂಪೂರ್ಣ ಲೇಔಟ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಎಂಜಿನಿಯರ್‌ಗಳಿಗೆ ಮೂಲ ಸೌಕರ್ಯಗಳನ್ನು ಯೋಜಿಸುವುದು ಕಷ್ಟಕರವಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಡಾವಣೆ ಹಸ್ತಾಂತರ ವಿಳಂಬ:ಈ ಬಗ್ಗೆ ಯಲಹಂಕ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮಾತನಾಡಿ, ಬಡಾವಣೆ ಹಸ್ತಾಂತರ ವಿಳಂಬವಾಗಿದೆ ಇದಕ್ಕೆ ಯೋಜನೆ ರೂಪಿಸಲಾಗುವುದು. ಒಂದು ವರ್ಷದೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಬಡಾವಣೆಯನ್ನು ಹಸ್ತಾಂತರಿಸಬೇಕಾಗಿತ್ತು. ಈಗ ವಿಳಂಬವಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಈಗ ಈ ಬಡಾವಣೆಗಳ ಅಭಿವೃದ್ಧಿಗೆ ಸುಮಾರು 400 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲಿಯೇ ಬಿಬಿಎಂಪಿಗೆ ಹಸ್ತಾಂತರಿಸುತ್ತೇವೆ ಎಂದಿದ್ದಾರೆ.
ತೆರಿಗೆಯನ್ನು ನಿಗದಿಪಡಿಸಲು ಸೂಚನೆ:ಈ ಮಧ್ಯೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಸ್ವಾಧೀನಾನುಭವ ಪತ್ರ ಹೊಂದಿರುವ ಸ್ವತ್ತುಗಳನ್ನು ಅಧಿಕಾರಿಗಳು ಕೂಡಲೇ ಗುರುತಿಸಬೇಕು. ಅಂತಹ ಸ್ವತ್ತುಗಳಿಗೆ ತೆರಿಗೆಯನ್ನು ನಿಗದಿಪಡಿಸಿ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ನಂತರ ಅವರಿಂದ ತೆರಿಗೆಯನ್ನು ಸಂಗ್ರಹಿಸಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ಇದನ್ನೂ ಓದಿ:ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಬಡಾವಣೆ ನಿರ್ಮಾಣ: ಪರ್ಯಾಯ ಭೂಮಿ, 5 ಲಕ್ಷ ಪರಿಹಾರ ನೀಡುವಂತೆ ಬಿಡಿಎಗೆ ಹೈಕೋರ್ಟ್ ಸೂಚನೆ