ಬೆಂಗಳೂರು:ನೆರೆಯ ದೇಶಗಳ ಜೊತೆ ವ್ಯವಹಾರ ಮಾಡುವ, ಸಂಕಷ್ಟದಲ್ಲಿದ್ದಾಗ ಆ ರಾಷ್ಟ್ರಗಳಿಗೆ ಸಹಾಯ ಮಾಡುವ ಧೈರ್ಯ ಇಂದು ದೇಶಕ್ಕೆ ಬಂದಿದೆ. ಇದು ದೇಶದ ತ್ರಿವರ್ಣ ಧ್ವಜಕ್ಕೆ ಹೆಚ್ಚು ಗೌರವ ತಂದುಕೊಟ್ಟಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯೇ ಕಾರಣ, ಮೋದಿ ಅವರಿಂದಾಗಿಯೇ ಇಂದು ಭಾರತಕ್ಕೆ ಜಾಗತಿಕ ಮನ್ನಣೆ, ಗೌರವ ಸಿಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕರಂದ್ಲಾಜೆ: ಮಲ್ಲೇಶ್ವರಂನಲ್ಲಿರುವ ಬಿಜೆಪಿ ನಗರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷ ಕಳೆದಿದೆ. ಅವರು ಪ್ರಧಾನಿಯಾಗೋ ಮೊದಲು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಮೋದಿ ಪ್ರಧಾನಿಯಾದ ಬಳಿಕ ಉತ್ತಮ ಆಡಳಿತ ನಡೆಸಿದ್ದಾರೆ. ಕಳೆದ ಎರಡು ವರ್ಷ ಕಠಿಣವಾಗಿತ್ತು.
ಕೊರೊನಾ ಬಂದು ಇಡೀ ದೇಶವೇ ಸಮಸ್ಯೆ ಎದುರಿಸಿತ್ತು. ಕೊರೊನಾ ಬಳಿಕ ಹೆಚ್ಚು ಬಂಡವಾಳ ಹೂಡಿಕೆ ಕೂಡ ಹರಿದು ಬಂದಿದೆ. ಇದರ ನಡುವೆ ಜಿಡಿಪಿ ಕೂಡ ಶೇ.8.5ರಷ್ಟು ಇದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದ ನಡುವೆ ಎಲ್ಲ ವಿದ್ಯಾರ್ಥಿಗಳನ್ನ ಕರೆದುಕೊಂಡು ಬರಲು ಸಫಲರಾಗಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾರತವನ್ನ ಹಾಡಿ ಹೊಗಳಿದ್ದಾರೆ ಎಂದು ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡರು.
ಭ್ರಷ್ಟಾಚಾರ ರಹಿತ ಆಡಳಿತ:ಮೋದಿಯವರು 20 ವರ್ಷ ಆಡಳಿತ ಮಾಡಿದ್ದಾರೆ. 12 ವರ್ಷ ಗುಜರಾತ್ ಸಿಎಂ ಆಗಿ, 8 ವರ್ಷ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ. ಗುಜರಾತ್ ಮಾದರಿಯಲ್ಲಿ ದೇಶವನ್ನು ಅಭಿವೃದ್ಧಿ ಮಾಡಲು ಕೆಲಸ ಮಾಡಿದ್ದಾರೆ. ದೇಶದ ಗಡಿಗಳಲ್ಲಿ ಭದ್ರತೆ ಸಿಗಬೇಕು, ಸೈನಿಕರಿಗೆ ಬಲ ಸಿಗಬೇಕು ಅಂತ ವಿಚಾರಗಳನ್ನು ಇಟ್ಟರು. ನಾಲ್ಕು ಅಂಶ ಇಟ್ಟುಕೊಂಡು ದೇಶದ ಜನತೆ ಮುಂದೆ ಮತ ಕೇಳಿದ್ದರು. ಇದುವರೆಗೂ ಒಂದು ಕಪ್ಪು ಚುಕ್ಕೆ ಇಲ್ಲದೇ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ವಿದೇಶದವರು ಮನಮೋಹನ್ ಸಿಂಗ್ ಅವರನ್ನು ಕರೆದು ಮಾತನಾಡಿಸುವ ಕೆಲಸ ಮಾಡುತ್ತಿರಲಿಲ್ಲ ಎಂದರು.
ದೇಶದ ಗಡಿಗೆ ಬೇಲಿ ಹಾಕುವ ಕೆಲಸ ಆಗಿದೆ: ಮೋದಿಯವರಿಗೆ ಗೌರವ ಕೊಟ್ಟರೆ, ಇಡೀ ದೇಶಕ್ಕೆ ಗೌರವ ಸಿಕ್ಕಂತಾಗಿದೆ. ಉಕ್ರೇನ್-ರಷ್ಯಾ ಯುದ್ಧದಲ್ಲಿ 20 ಸಾವಿರ ಜನರನ್ನ ಸುರಕ್ಷಿತವಾಗಿ ಕರೆತಂದರು. ಏಕಕಾಲದಲ್ಲಿ ಎರಡೂ ದೇಶದ ಪ್ರಧಾನಿಗಳ ಜೊತೆ ಮಾತನಾಡಿದ್ದರೇ ಅದು ಮೋದಿ ಮಾತ್ರ. ನೆರೆಯ ದೇಶಗಳ ಜೊತೆ ವ್ಯವಹಾರ ಮಾಡುವ, ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವ ಧೈರ್ಯ ದೇಶಕ್ಕೆ ಬಂದಿದೆ.