ಬೆಂಗಳೂರು:ಏರೋ ಇಂಡಿಯಾ ಸ್ಥಳಾಂತರದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮತ್ತೆ ಯಲಹಂಕದ ವಾಯುನೆಲೆಯಲ್ಲಿ 2023 ನೇ ಸಾಲಿನ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಸಲು ಕೇಂದ್ರ ಸರ್ಕಾರ ಒಲವು ತೋರಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ.
1996 ರಿಂದ ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಆದರೆ, ಇತ್ತೀಚೆಗೆ ವೈಮಾನಿಕ ಪ್ರದರ್ಶನವನ್ನ ಯಲಹಂಕದಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಬೇಕೆಂಬ ಚರ್ಚೆಗಳು ನಡೆಯುತ್ತಿವೆ. ವೈಮಾನಿಕ ಪ್ರದರ್ಶನವನ್ನ ಲಖನೌ ದಲ್ಲಿ ನಡೆಸಬೇಕು, ಇದರಿಂದ ಉತ್ತರಪ್ರದೇಶದ ಅಭಿವೃದ್ಧಿಗೆ ಅನುಕೂಲವಾಗುತ್ತೆ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಯಲಹಂಕದಿಂದ ಬೇರೆಡೆ ಸ್ಥಳಾಂತರಿಸುವ ದೊಡ್ಡ ಚರ್ಚೆ ಸಹ ನಡೆದಿತ್ತು. ಆಗ ಮೈತ್ರಿ ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು ಮತ್ತು ರಾಜ್ಯ ಸಂಸದರ ನಿಯೋಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಏರೋ ಇಂಡಿಯಾ ಸ್ಥಳಾಂತರಿಸದಂತೆ ಮನವಿ ಮಾಡಿದ್ದರು. ಬಳಿಕ ಕೇಂದ್ರ ಸರ್ಕಾರ ಸ್ಥಳಾಂತರ ನಿರ್ಧಾರವನ್ನು ಕೈಬಿಟ್ಟಿದೆ.