ಬೆಂಗಳೂರು :ರಾಜ್ಯದ 100 ವಿವಿಧ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ವಿವಿಧ 100 ಎಂಜನಿಯರಿಂಗ್ ಕಾಲೇಜುಗಳನ್ನು ಜೋಡಿಸಿ ಕೌಶಲ್ಯ ಅಭಿವೃದ್ಧಿಯಲ್ಲಿ ತರಬೇತಿ ನೀಡುವ ಮೂಲಕ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಬೇಡಿಕೆಯಿರುವ ಉದ್ಯೋಗಗಳಿಗೆ ಸೂಕ್ತವಾಗಿ ಯುವ ಜನಾಂಗವನ್ನು ಸಜ್ಜುಗೊಳಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಾಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ಶುಕ್ರವಾರ ನಡೆದ ಮಾಹಿತಿ ತಂತ್ರಜ್ಞಾನ ಕೌಶಲ್ಯ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಲಭ್ಯವಿರುವ ವಿಫುಲ ಹುದ್ದೆಗಳಿಗೆ ಕೌಶಲ್ಯ ನಿಪುಣತೆಯಿರುವ ಅಭ್ಯರ್ಥಿಗಳ ಅವಶ್ಯಕತೆಯಿದೆ. ಅನಿಮೇಷನ್, ಗೇಮಿಂಗ್, ಕೃತಕ ಬುದ್ಧಿಮತ್ತೆ, ರೊಬೋಟ್ಸ್, ಆಟೋಮೆಷಿನ್, ಡ್ರೋನ್ ಮುಂತಾದ ಕ್ಷೇತ್ರಗಳಲ್ಲಿ ಈಗ ಉದ್ಯೋಗಾವಕಾಶಗಳು ಹೇರಳವಾಗಿದೆ. ಅಂತಹ ಹುದ್ದೆಗಳಿಗೆ ಯುವಕ ಯುವತಿಯರನ್ನು ಕುಶಲಿಗಳನ್ನಾಗಿ ಸಿದ್ಧ ಮಾಡಲು ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರದ ಐಟಿಐ ತರಬೇತಿ ಸಂಸ್ಥೆಗಳು ಸ್ಥಳೀಯ ಉದ್ಯೋಗಕ್ಕೆ ಅನುಗುಣವಾಗಿ ವೃತ್ತಿ ತರಬೇತಿ ನೀಡುವಂತೆ ಮಾರ್ಪಾಟು ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.