ಬೆಂಗಳೂರು: ಮತಾಂತರಕ್ಕೆ ಕಡಿವಾಣ ಹಾಕಲು ಮಸೂದೆಯನ್ನು ತರುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮತಾಂತರವನ್ನು ಖಂಡಿತವಾಗಿ ಸರ್ಕಾರ ಸಹಿಸಲ್ಲ. ಎಲ್ಲ ಧರ್ಮದವರು ಶಾಂತಿಯುತವಾಗಿ ಬದುಕಬೇಕು ಎಂದರು.
ಮತಾಂತರಕ್ಕೆ ಕಡಿವಾಣ ಹಾಕುವ ಕುರಿತು ಸಚಿವರ ಪ್ರತಿಕ್ರಿಯೆ ಮತಾಂತರ ಮಾಡುವುದರಿಂದ ಶಾಂತಿ, ಸುವ್ಯವಸ್ಥೆ ಹಾಳಾಗುತ್ತದೆ. ಶಾಸಕರ ತಾಯಿಯನ್ನೇ ಮತಾಂತರ ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡುವ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿದರು.
ನಮ್ಮ ಸೈಬರ್ ವಿಭಾಗ ಚುರುಕಾಗಿದೆ. ಏನೆಲ್ಲಾ ಮಾಡಿ ಮತಾಂತರ ತಡೆಗಟ್ಟಲು ಸಾಧ್ಯವೋ ಅದನ್ನು ಮಾಡುತ್ತೇವೆ. ತಡೆಯಲಿಕ್ಕೆ ಏನೆಲ್ಲಾ ಎಕ್ಯೂಪ್ಮೆಂಟ್ ಬೇಕು ಅದನ್ನು ಬಳಸುತ್ತೇವೆ ಎಂದರು. ಇನ್ನು ನಿನ್ನೆ ಅಂಗೀಕಾರವಾಗಿರುವ ವಿಧೇಯಕಗಳಿಗೆ ಯಾರ ವಿರೋಧವೂ ಇಲ್ಲ ಎಂದರು.
ವಿಜಯಪುರದಲ್ಲೂ ಮತಾಂತರಗಳು ನಡೆಯುತ್ತಿದೆ:
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲೂ ಅನೇಕ ಮತಾಂತರಗಳು ನಡೆಯುತ್ತಿದೆ. ಈ ಬಗ್ಗೆ ದೇವಾನಂದ ಚವ್ಹಾಣ್ ನಿನ್ನೆ ಅಧಿವೇಶನ ದಲ್ಲಿ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್, ಮತಾಂತರಕ್ಕೆ ಕಾನೂನು ತಂದಿದ್ದಾರೆ. ಅದೇ ರೀತಿ ನಮ್ಮಲ್ಲಿ ಕೂಡ ಕಾನೂನು ತರಲು ಗೃಹ ಸಚಿವರು ಚರ್ಚೆ ಮಾಡಿದ್ದಾರೆ. ಲವ್ ಜಿಹಾದ್ ಹಾಗೂ ಮತಾಂತರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ ಎಂದರು.
ನಮ್ಮ ಕ್ಷೇತ್ರದಲ್ಲಿ ಮತಾಂತರ ಆಗಿಲ್ಲ - ಬಿ.ಸಿ. ಪಾಟೀಲ್:
ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಯಾವುದೇ ಮತಾಂತರ ಆಗಿಲ್ಲ. ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದು ನೋಡಿದೆ. ಮೋಸಗೊಳಿಸಿ, ಮನ ಪರಿವರ್ತನೆ ಮಾಡೋದು ಸರಿಯಲ್ಲ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅವರ ತಾಯಿಯನ್ನೇ ಮತಾಂತರ ಮಾಡಿರೋದು ಸರಿಯಲ್ಲ ಎಂದು ಹೇಳಿದರು.