ಕರ್ನಾಟಕ

karnataka

ETV Bharat / state

ಕುರಿ ಮಾಂಸದಂಗಡಿಯಲ್ಲಿ ದನದ ಮಾಂಸ ಮಾರಾಟ ಆರೋಪ: ವ್ಯಾಪಾರಿಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್ - karnataka high court

ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ಮತ್ತು ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಸಾಕ್ಷಾಧಾರ ತಿರುಚಲು ಯತ್ನಿಸಬಾರದು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿದೆ.

accused-of-selling-beef-high-court-grants-conditional-bail-to-trader
ಕುರಿ ಮಾಂಸದಂಗಡಿಯಲ್ಲಿ ದನದ ಮಾಂಸ ಮಾರಾಟ ಆರೋಪ: ವ್ಯಾಪಾರಿಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್

By

Published : May 25, 2023, 8:27 PM IST

ಬೆಂಗಳೂರು:ಕುರಿ ಮಾಂಸದಂಗಡಿಯಲ್ಲಿ ದನದ ಮಾಂಸ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಬಂಧನ ಭೀತಿ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಪ್ರಕರಣ ಸಂಬಂಧ ಕರ್ನಾಟಕ ಜಾನುವಾರು ಹತ್ಯೆ ಪತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ-2020ರ ಅಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಠಾಣಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದರಿಂದ ಬಂಧನ ಭೀತಿಯಲ್ಲಿದ್ದ ಹೈದರಿ ಅಲಿ ಅಲಿಯಾಸ್​ ತಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಆಟೋ ರಿಕ್ಷಾದಲ್ಲಿ ಗೋ ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಆ ಇಬ್ಬರು ಆರೋಪಿಗಳು, ಅರ್ಜಿದಾರ ತಮಗೆ ಗೋಮಾಂಸ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಅರ್ಜಿದಾರ ಶೇ.60ರಷ್ಟು ಅಂಗವೈಕಲ್ಯ ಹೊಂದಿರುವುದನ್ನು ದೃಢಪಡಿಸಿ ಬೆಂಗಳೂರು ಮೆಡಿಕಲ್ ಬೋರ್ಡ್ ನೀಡಿರುವ ಪ್ರಮಾಣ ಪತ್ರವನ್ನು ಆತನ ಪರ ವಕೀಲರು ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಇಬ್ಬರು ಆರೋಪಿಗಳು ಈಗಾಗಲೇ ಬಂಧನಕ್ಕೆ ಒಳಗಾಗಿ ವಿಚಾರಣಾ ನ್ಯಾಯಾಲಯದಿಂದ ಜಾಮೀನು ಸಹ ಪಡೆದುಕೊಂಡಿದ್ದಾರೆ. ಇದರಿಂದ ಅರ್ಜಿದಾರನಿಗೆ ಜಾಮೀನು ನಿರಾಕರಿಸಲು ಯಾವುದೇ ಸಕಾರಣ ಇಲ್ಲವಾಗಿದ್ದು, ಷರತ್ತುಗಳನ್ನು ವಿಧಿಸಿ ಜಾಮೀನು ನೀಡಬಹುದಾಗಿದೆ. ಅರ್ಜಿದಾರ ಮುಂದೆ ಬಂದು ತನಿಖೆಗೆ ಸಹಕರಿಸಬೇಕಿದೆ ಎಂದು ತಿಳಿಸಿದರು.

ಷರತ್ತುಗಳು: ಒಂದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಸಾಕ್ಷ್ಯಧಾರ ತಿರುಚಲು ಯತ್ನಿಸಬಾರದು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ಅಲಿ ಹೊಸಕೋಟೆಲ್ಲಿ ಮಟನ್ (ಕುರಿ ಮಾಂಸ) ಮಾರಾಟ ಅಂಗಡಿ ನಡೆಸುತ್ತಿದ್ದಾನೆ. ಆತ ಶೇ.60ರಷ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ. ಆತನಿಂದ ದನದ ಮಾಂಸ ಖರೀದಿಸಿದ್ದಾಗಿ ಪ್ರಕರಣದ ಮೊದಲ ಮತ್ತು ಎರಡನೇ ಆರೋಪಿ ದೂರು ನೀಡಿದ್ದರು. ಅದರ ಹೇಳಿಕೆ ಆಧರಿಸಿ ಅರ್ಜಿದಾರ ಅಲಿಯನ್ನು ಆರೋಪಿಯಾಗಿ ಸೇರಸಲಾಗಿದೆ. ಆದರೆ, ಪೊಲೀಸರು ಅರ್ಜಿದಾರನಿಂದ ಗೋಮಾಂಸವನ್ನು ಜಪ್ತಿ ಮಾಡಿಲ್ಲ. ನಿರೀಕ್ಷಣಾ ಜಾಮೀನು ಮಂಜೂರಾತಿಗೆ ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೂ ಬದ್ಧವಾಗಿರುತ್ತಾನೆ. ಆದ್ದರಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಈ ವಾದವನ್ನು ಆಕ್ಷೇಪಿಸಿದ ಸರ್ಕಾರಿ ವಕೀಲರು, ಕುರಿ ಮಾಂಸದ ವ್ಯಾಪಾರ ಅಂಗಡಿ ನಡೆಸುತ್ತಿದ್ದ ಅರ್ಜಿದಾರರು, ಗೋಮಾಂಸ ಮಾರಾಟ ಮಾಡುತ್ತಿದ್ದ ಎಂಬ ಬಗ್ಗೆ ಆರೋಪವಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕಿದೆ. ಅರ್ಜಿದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ ನಿರೀಕ್ಷಣಾ ಜಾಮೀನು ಪಡೆಯುವ ಅರ್ಹತೆ ಅರ್ಜಿದಾರ ಹೊಂದಿಲ್ಲವಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.

ಇದನ್ನೂ ಓದಿ:ಉದ್ಯೋಗದಾತರು - ಉದ್ಯೋಗಿಗಳು ರಾಜಿ ಸಂಧಾನದ ನಿರ್ಧಾರಕ್ಕೆ ಬದ್ಧರಾಗಿರಬೇಕು: ಹೈಕೋರ್ಟ್

ABOUT THE AUTHOR

...view details