ಬೆಂಗಳೂರು: ನೀವೇನಾದರೂ ಅಪರಿಚಿತ ಸ್ಥಳಕ್ಕೆ ಹೋದಾಗ ಅಪಾಯವಿದೆ ಎಂದು ನಿಮಗೆ ಅನ್ನಿಸಿದೆಯಾ? ಪ್ರಯಾಣದ ವೇಳೆ ಸಹ ಪ್ರಯಾಣಿಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋದು ಮನವರಿಕೆಯಾದರೆ ಕೂಡಲೇ ಪ್ಯಾನಿಕ್ ಬಟನ್ ಒತ್ತಿದರೆ ಸಾಕು ನೀವು ಕಳುಹಿಸಬೇಕಾದ ವ್ಯಕ್ತಿಗಳಿಗೆ ಅಲರ್ಟ್ ಸಂದೇಶ ರವಾನೆಯಾಗುವಂತಹ ನೂತನ ಅಪ್ಲಿಕೇಶನ್ವೊಂದನ್ನು ಕಾಲೇಜು ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ನಲ್ಲಿ ಕೆ.ಆರ್. ಪುರ ಸಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆಯೇಷಾ ಸರ್ವತ್ 'ವುಮೆನ್ ಸೇಫ್ಟಿ' ಅಪ್ಲಿಕೇಶನ್ ಸಾಫ್ಟ್ವೇರ್ ಸಿದ್ಧಪಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಬೆಳೆದು ನಿಂತಿದ್ದಾರೆ. ಮನೆ ಕಾಯಕದ ಜೊತೆಗೆ ಮನೆಯಿಂದಾಚೆಗೂ ಸಹ ದುಡಿಯುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ತಡರಾತ್ರಿ ಬರಬೇಕಾದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತೆ ಕೃತ್ಯಗಳು ನಡೆದಿರುವ ನಿದರ್ಶನಗಳು ಇವೆ.
ಅಲ್ಲದೆ, ಒಂಟಿಯಾಗಿ ಕ್ಯಾಬ್ನಲ್ಲಿ ಸಂಚರಿಸುವಾಗ ಆತಂಕ ಇದ್ದೇ ಇರಲಿದೆ. ಹೀಗಾಗಿ ರೆಡ್ ಝೋನ್ ಪ್ರದೇಶಗಳಲ್ಲಿ ಅಥವಾ ಅಪರಿಚಿತ ಸ್ಥಳಗಳಲ್ಲಿ ಓಡಾಡುವಾಗ ಈ ಅಪ್ಲಿಕೇಶನ್ ಮಹಿಳೆಯರ ನೆರವಿಗೆ ಬರಲಿದೆ. ಅಪಾಯದಲ್ಲಿ ಸಿಲುಕಿರುವುದು ಗೊತ್ತಾದರೆ ಕೂಡಲೇ ಪ್ಯಾನಿಕ್ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಜೊತೆಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವ ಯಾರಿಗಾದರೂ ಕಳುಹಿಸಿದರೆ ಕೂಡಲೇ 'ಐಯಮ್ ಇನ್ ಟ್ರಬಲ್' ಎಂದು ಲೊಕೇಶನ್ ಸಹಿತ ಸಂದೇಶ ರವಾನೆಯಾಗಲಿದೆ ಎಂದು ಈಟಿವಿ ಭಾರತಕ್ಕೆ ಆಯೇಷಾ ತಿಳಿಸಿದ್ದಾರೆ.