ಬೆಂಗಳೂರು:ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವ ದಂತ ವೈದ್ಯೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಖನೌ ಮೂಲದ ಪ್ರಿಯಾಂನ್ಷಿ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ ಎಂದು ತಿಳಿದುಬಂದಿದೆ. ಯುವತಿಯು ಚಿಕ್ಕ ವಯಸ್ಸಿನಿಂದಲೂ ವೈದ್ಯೆ ಆಗಬೇಕೆಂಬ ಕನಸು ಕಂಡಿದ್ದಳು. ಅದರಂತೆ ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಉತ್ತರ ಪ್ರದೇಶ ಲಖನೌ ಮೂಲದ ಪ್ರಿಯಾಂನ್ಷಿ ಕಾನ್ಪುರದಲ್ಲಿ ಬಿಡಿಎಸ್ ಕೋರ್ಸ್ ಮುಗಿಸಿ 2020ರಲ್ಲಿ ಬೆಂಗಳೂರಿಗೆ ಬಂದಿದ್ದಳು.
ಬೆಂಗಳೂರಿನ ಆರ್ಎಂವಿ ಲೇಔಟ್ನಲ್ಲಿ ವಾಸಿಸುತ್ತಿದ್ದ ಯುವತಿ, ಇಲ್ಲಿನ ಆಸ್ಪತ್ರೆಯೊಂದರಲ್ಲಿ ಇಂಟರ್ನ್ಶಿಪ್ ಮುಗಿಸಿ, ಬಳಿಕ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿಯೇ ಪರಿಚಯವಾದ ವೈದ್ಯರೊಬ್ಬರ ಜೊತೆ ಯುವತಿಗೆ ಪ್ರೇಮಾಂಕುರವಾಗಿತ್ತು. ಆದರೆ, ಪ್ರಿಯಾಂನ್ಷಿಯ ಪ್ರೇಮ ನಿವೇದನೆಗೆ ವೈದ್ಯನ ಕಡೆಯಿಂದ ನಿರಾಕರಣೆ ವ್ಯಕ್ತವಾಗಿತ್ತು. ಇದರಿಂದಲೇ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈದ್ಯೆ ತಂದೆಯಿಂದ ದೂರು:ಜನವರಿ 25ರಂದು ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕವೈದ್ಯೆ ಮೃತಪಟ್ಟ ಸುದ್ದಿ ಕೇಳಿ ಬೆಂಗಳೂರಿಗೆ ಬಂದ ತಂದೆ ತನ್ನ ಮಗಳ ಸಾವಿಗೆ ಮತ್ತೊರ್ವ ವೈದ್ಯನೇ ಕಾರಣ ಎಂದು ಆರೋಪಿಸಿ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಸ್ಪತ್ರೆಯ ವೈದ್ಯರೊಬ್ಬರು ತನ್ನನ್ನು ಪ್ರೀತಿಸುವಂತೆ ಅವಳಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಅಲ್ಲದೆ, ಹಲವು ಸಲ ನಿರಾಕರಿಸಿದರೂ ಮದುವೆಯಾಗುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ಮುಂದುವರೆಸಿದ್ದ. ಜೊತೆಗೆ ಆಕೆಯ ಬಗ್ಗೆ ಆಸ್ಪತ್ರೆಯಲ್ಲಿ ಅಪಪ್ರಚಾರ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದರು.
ತನಿಖೆ ಬಳಿಕ ಪ್ರಕರಣಕ್ಕೆ ತಿರುವು :ಆದರೆ ಈ ಬಗ್ಗೆಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬೇರೆಯದೇ ಆಯಾಮ ಸಿಕ್ಕಿದೆ. ವೈದ್ಯೆ ಪ್ರಿಯಾಂನ್ಷಿಯ ತಂದೆ ಆರೋಪ ಹೊರಿಸಿದ್ದ ವೈದ್ಯನಿಗೆ ಆಕೆಯೇ ಪ್ರೇಮ ನಿವೇದನೆ ಮಾಡಿದ್ದಳು. ಬಳಿಕ ಆತನಿಗೆ ಆಕೆ ಮದುವೆಯಾಗುವಂತೆಯೂ ಕೇಳಿಕೊಂಡಿದ್ದಳು. ಆದರೆ ಆತ ನಿರಾಕರಿಸಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸಂಗತಿ ಕೇಳಿ ಬಂದಿದೆ.
ಸದ್ಯ ಪೊಲೀಸರು ಹೇಳುವ ಪ್ರಕರಣ ಮಗಳ ಸಾವಿನ ತನಿಖೆ ವೇಳೆ ಬಯಲಾದ ಸಂಗತಿಗಳ ಬಗ್ಗೆ ಆಕೆಯ ಪೊಷಕರಿಗೆ ತಿಳಿಸಿದ್ದರಂತೆ. ಈ ವೇಳೆ ಪೋಷಕರು ವೈದ್ಯನ ವಿರುದ್ಧ ದಾಖಲಿಸಿದ್ದ ದೂರು ವಾಪಸ್ ಪಡೆಯಲು ನಿರ್ಧರಿಸಿದ್ದರಂತೆ. ಆದರೆ, ಅದಾಗಲೇ ಎಫ್ಐಆರ್ ದಾಖಲಾಗಿರುವುದರಿಂದ ಅದರ ಪ್ರಕಾರ ತನಿಖೆ ನಡೆಸಲಾಗುವುದು ಎಂದು ಪೋಷಕರಿಗೆ ಸಂಜಯ್ ನಗರ ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.