ಬೆಂಗಳೂರು: 9ನೇ ತರಗತಿಗೆ ಇರುವ ಎಸ್ಒಪಿ ಅನ್ನೇ 6 ರಿಂದ 8ನೇ ತರಗತಿವರೆಗಿನ ತರಗತಿಗಳ ಆರಂಭಕ್ಕೂ ಪಾಲನೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
6 ರಿಂದ 8ರವರೆಗಿನ ತರಗತಿಗಳು ಆರಂಭ.. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಬಿ ಸಿ ನಾಗೇಶ್.. ಶೇ.50ರಷ್ಟು ಹಾಜರಾತಿಯೊಂದಿಗೆ ಶಾಲೆಗಳ ಆರಂಭ :9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಶಾಲೆಗಳನ್ನು ತೆರೆದು ಅದರ ಅನುಭವದ ಆಧಾರದಲ್ಲಿ 6ರಿಂದ 8ನೇ ತರಗತಿಗಳ ಶಾಲೆ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ. 6ರಿಂದ ಶೇ.50ರ ಹಾಜರಾತಿಯೊಂದಿಗೆ ಶಾಲೆಗಳನ್ನ ಆರಂಭ ಮಾಡಲಿದ್ದೇವೆ.
50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದ್ದಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನದ ಬ್ಯಾಚ್ ವೈಸ್ ತರಗತಿ ನಡೆಸಲಾಗುತ್ತದೆ. ದಿನ ಬಿಟ್ಟು ದಿನ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ. ವಾರದಲ್ಲಿ ಐದು ದಿನ ಮಾತ್ರ ಶಾಲೆ ನಡೆಯಲಿದೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ 9ನೇ ತರಗತಿಯಿಂದ ಅಳವಡಿಸಿರುವ ಎಸ್ಒಪಿ ಅನ್ನೇ ಇಲ್ಲಿಯೂ ಸಂಪೂರ್ಣವಾಗಿ ಅಳವಡಿಸಲಿದ್ದೇವೆ ಎಂದರು.
ಶಿಕ್ಷಕರಿಗೆ ಲಸಿಕೆ :ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿರುವ 2,61,000 ಶಿಕ್ಷಕರಲ್ಲಿ 2,50,000 ಶಿಕ್ಷಕರಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ. ಅದರಲ್ಲಿ 1,10,000 ಶಿಕ್ಷಕರಿಗೆ ಎರಡೂ ಡೋಸ್ ಲಸಿಕೆ ಹಾಕಲಾಗಿದೆ. ಶೇ. 90ರಷ್ಟು ಬೋಧಕೇತರ ಸಿಬ್ಬಂದಿಗೂ ವ್ಯಾಕ್ಸಿನೇಷನ್ ಆಗಿದೆ. ಉಳಿದ ಸಿಬ್ಬಂದಿಗೂ ಲಸಿಕೆ ಕೊಡಿಸಲಾಗುತ್ತದೆ ಎಂದರು.
ಎಸ್ಒಪಿ ಪಾಲಿಸಲು ಸೂಚನೆ :ಭೌತಿಕ ತರಗತಿಗಳು ಆರಂಭಗೊಂಡ ನಂತರ ಶಾಲೆಗಳಿಗೆ ಭೇಟಿ ನೀಡುವಂತೆ ಎಲ್ಲಾ ಬಿಇಒಗಳಿಗೆ ಸೂಚನೆ ನೀಡಲಾಗಿತ್ತು. ಸರ್ಕಾರದ ಎಸ್ಒಪಿ ಅನ್ನು ಬಹುತೇಕ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂಬ ಮಾಹಿತಿ ಬಂದಿದೆ. ಕೆಲವೇ ಶಾಲೆಗಳಲ್ಲಿ ಕೊಠಡಿಗಳಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇತ್ತು ಎನ್ನುವ ಮಾಹಿತಿ ಬಂದಿದೆ. ಮತ್ತೆ ಆ ರೀತಿ ಆಗದಂತೆ ಮುನ್ನೆಚ್ಚರಿಕೆವಹಿಸಿ ಎಂದು ಅವರಿಗೆ ಸೂಚಿಸಿದ್ದೇವೆ. ಎಸ್ಒಪಿ ಪಾಲನೆ ಕಡ್ಡಾಯವಾಗಿ ಮಾಡಲೇಬೇಕು ಎಂದು ಸೂಚಿಸಿದ್ದೇವೆ. ಕಾಲ ಕಾಲಕ್ಕೆ ಪರಿಶೀಲನೆ ಮಾಡುತ್ತೇವೆ ಎಂದರು.
1ನೇ ತರಗತಿಯಿಂದ ಶಾಲೆಗಳ ಆರಂಭಕ್ಕೆ ಸಭೆ :ಗಣೇಶ ಚತುರ್ಥಿಯ ನಂತರ ಮತ್ತೊಮ್ಮೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಲಿದೆ. ಆಗ ಒಂದರಿಂದ ಐದನೇ ತರಗತಿಗಳನ್ನೂ ಆರಂಭ ಮಾಡುವ ಬಗ್ಗೆ ವಿಚಾರ ಮಾಡುತ್ತೇವೆ ಎಂದು ಸಚಿವ ನಾಗೇಶ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ 6,7,8ನೇ ತರಗತಿ ಪುನಾರಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್